ನವದೆಹಲಿ: ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರು ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಸಂಸದೆ ಸೀಟ್ ಗಾಗಿ ದೊಡ್ಡ ರಾದ್ದಾಂತವೇ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ತೃಣಮೂಲ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ದೊಲಾ ಸೇನ್ ಅವರು ದೆಹಲಿಯಿಂದ ಕೋಲ್ಕತಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಭದ್ರತಾ ನಿಯಮಾವಳಿಗಳನ್ನು ನಿರಾಕರಿಸಿ, ತುರ್ತು ನಿರ್ಗಮನ ದ್ವಾರದ ಬಳಿ ಇರುವ ಸೀಟ್ ಬೇಕು ಎಂದು ಪಟ್ಟು ಹಿಡಿದ ಪರಿಣಾಮ ವಿಮಾನ ಅರ್ಧ ಗಂಟೆ ತಡವಾಗಿ ಟೇಕಾಫ್ ಆಯಿತು.
ಸೇನ್ ಅವರು ವೀಲ್ ಚೇರ್ ನಲ್ಲಿ ಕುಳಿತುಕೊಳ್ಳುವ ತಮ್ಮ ತಾಯಿಗಾಗಿ ಎಕೊನೊಮಿ ಕ್ಲಾಸ್ ನ ಮೊದಲ ಸಾಲಿನ ಸೀಟ್ ಬುಕ್ ಮಾಡಿದ್ದರು. ಅದು ತುರ್ತು ನಿರ್ಗಮನದ ದ್ವಾರದ ಪಕ್ಕದಲ್ಲೇ ಬಂದಿತ್ತು. ಆದರೆ ಭದ್ರತಾ ನಿಯಮಗಳ ಪ್ರಕಾರ ದೈಹಿಕವಾಗಿ ಸಧೃಡವಾಗಿರುವ ಪ್ರಯಾಣಿಕರು ಮಾತ್ರ ತುರ್ತು ದ್ವಾರದ ಬಳಿ ಕುಳಿತುಕೊಳ್ಳಲು ಅವಕಾಶವಿದೆ. ಹೀಗಾಗಿ ಏರ್ ಇಂಡಿಯಾ ಸಿಬ್ಬಂದಿ ದೊಲಾ ಸೇನ್ ಅವರ ತಾಯಿಗೆ ಬ್ಯುಸಿನೆಸ್ ಕ್ಲಾಸ್ ನ ಮತ್ತೊಂದು ಸೀಟ್ ನೀಡುವುದಾಗಿ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಒಪ್ಪಂದ ಸಂಸದೆ ವಿಮಾನ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರಿಂದ ವಿಮಾನ 39 ನಿಮಿಷಗಳ ಕಾಲ ವಿಳಂಬವಾಯಿತು.
ಶಿವಸೇನಾ ಸಂಸದ ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರಿಂದ ಗಾಯಕ್ವಾಡ್ ವಿಮಾನಯಾನಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಂತರ ಇಂದು ಏರ್ ಇಂಡಿಯಾ ಸಂಸದನ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ.