ನವದೆಹಲಿ: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಕ್ಕೆ ತೆರೆ ಎಳೆಯಲು ಯತ್ನಿಸುತ್ತಿರುವ ಕೇಂದ್ರ ಚುನಾವಣಾ ಆಯೋಗ ಇವಿಎಂ ಯಂತ್ರವನ್ನು ಹ್ಯಾಕ್ ಮಾಡುವಂತೆ ಬುಧವಾರ ಜನತೆಗೆ ಬಹಿರಂಗ ಸವಾಲು ಹಾಕಿದೆ.
ಚುನಾವಣೆಯಲ್ಲಿ ಇವಿಎಂ ಯಂತ್ರವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷದ ನಾಯಕರು ಇಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ, ದೂರು ನೀಡಿದ ಬೆನ್ನಲ್ಲೇ ಚುನಾವಣಾ ಆಯೋಗ ಮೇ ಮೊದಲ ವಾರದಲ್ಲಿ ಇವಿಎಂ ಅನ್ನು ಹ್ಯಾಕ್ ಮಾಡುವಂತೆ ಸವಾಲು ಹಾಕಿದೆ.
ಮೇ ತಿಂಗಳ ಮೊದಲ ವಾರದಲ್ಲಿ ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು ಒಂದು ವಾರದ ಮಟ್ಟಿಗೆ ಅಥವಾ 10 ದಿನಗಳ ಮಟ್ಟಿಗೆ ಆಗಮಿಸಿ ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಲಿ ಎಂದು ಚುನಾವಣಾ ಆಯೋಗ ತಿಳಿಸಿದೆ
2009ರಲ್ಲಿ ಚುನಾವಣಾ ಆಯೋಗ ಇಂತಹದ್ದೇ ಸವಾಲನ್ನು ಒಡ್ಡಿತ್ತು. ಆದರೆ ಯಾರೂ ಇವಿಎಂ ಅನ್ನು ಹ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಕಮ್ಯುನಿಸ್ಟ್ ಪಾರ್ಟಿಯ ಸೀತಾರಾಮ ಯೆಚೂರಿ ನೇತೃತ್ವದ ಪ್ರತಿಪಕ್ಷ ನಿಯೋಗ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಇವಿಎಂ ವಿರುದ್ಧ ದೂರು ಸಲ್ಲಿಸಿದೆ.