ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಿರಾಕರಿಸುತ್ತಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ....
ಝಾಕಿರ್ ನಾಯಕ್
ಝಾಕಿರ್ ನಾಯಕ್
ಮುಂಬೈ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಿರಾಕರಿಸುತ್ತಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್  ನಾಯ್ಕ್‌ ವಿರುದ್ಧ ಗುರುವಾರ ದೆಹಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಝಾಕಿರ್ ನಾಯಕ್ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಜಾರಿ ನಿರ್ದೇಶನಾಲಯ ಅಕ್ರಮ ಹಣಕಾಸು ವ್ಯವಹಾರ ತಡೆ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್ ಇಂದು ತನ್ನ ಆದೇಶ ಹೊರಡಿಸಿದೆ.
ವಿದೇಶದಿಂದ ಇಂಟರ್ ನೆಟ್ ಮೂಲಕ ವಿಡಿಯೋ ವಿಚಾರಣೆಗೆ ಅವಕಾಶ ನೀಡಬೇಕು ಎಂಬ ಝಾಕಿರ್ ನಾಯಕ್ ಮನವಿಯನ್ನು ತಿರಸ್ಕರಿಸಿದ್ದ ಜಾರಿ ನಿರ್ದೇಶನಾಲಯ, ಖುದ್ದು ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ಜಾರಿ ಮಾಡಿದೆ. ಆದರೆ ಝಾಕಿರ್ ನಾಯಕ್ ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಡಿಯೋ ಲಿಂಕ್ ಮೂಲಕ ವಿಚಾರಣೆ ನಡೆಸಲು ಅವಕಾಶ ಇಲ್ಲ. ಅಲ್ಲದೆ ಝಾಕಿರ್ ನಾಯಕ್ ವಿರುದ್ಧ ಗಂಭೀರ ಆರೋಪಗಳಿರುವುದರಿಂದ ಅವರು ಸ್ವತಃ ವಿಚಾರಣೆಗೆ ಒಳಗಾಗಬೇಕು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕೋಮುವಾದ ಮತ್ತು ಭಯೋತ್ಪಾದನೆ ಪ್ರಚೋದಕ ಭಾಷಣಗಳನ್ನು ಪ್ರಸ್ತುತ ಪಡಿಸಿರುವ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ ಈಗಾಗಲೇ ಜಾಕಿರ್‌ ನಾಯಕ್‌ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿದೇಶದಲ್ಲಿರುವ ಜಾಕಿರ್‌ ನಾಯಕ್‌ ನನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ. 
ಇನ್ನು ನಾಯಕ್‌ ಒಡೆತನದ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (ಐಆರ್‌ಎಫ್‌) ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com