ನವದೆಹಲಿ: ದೆಹಲಿ ಕಾಂಗ್ರೆಸ್ ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಪಕ್ಷದ ಹಿರಿಯ ನಾಯಕ ಅಜಯ್ ಮಾಕೇನ್ ಸೇರಿದಂತೆ ಮೂವರ ವಿರುದ್ಧ ಕಿರುಕುಳದ ದೂರು ದಾಖಲಾಗಿದೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಚನಾ ಸಚ್‌ದೇವಾ ಎ ಮಾಕೇನ್ ಮತ್ತು ಹಿರಿಯ ನಾಯಕಿ ಶೋಭಾ ಓಝಾ ಮತ್ತು ನೆಟ್ಟಾ ಡಿ ಸೋಜಾ ವಿರುದ್ಧ ಮಾನಸಿಕ ಕಿರುಕುಳ ನೀಡಿದ ಬಗ್ಗೆ ಆರೋಪ ಮಾಡಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ಭೇಟಿಯಾದ ಕಾರಣಕ್ಕೆ ನನ್ನನ್ನು ಕೋಣೆಯೊಂದರಲ್ಲಿ ಬಂಧಿಯಾಗಿಸಿ ಕ್ಷಮಾಪಣ ಪತ್ರ ಬರೆಸಲಾಗಿದೆ ಎಂದು ರಚನಾ ಆರೋಪಿಸಿ ತುಘಲಕ್ ರಸ್ತೆಯ ಪೊಲೀಸ್ ಠಾಣೆಗೆ ಮೂವರ ವಿರುದ್ಧ ದೂರು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ತಮ್ಮ ಸಂಬಂಧಿಕರಿಗೆ ಟಿಕೆಟ್ ಹಂಚುತ್ತಿದ್ದು ನೈಜ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಆರೋಪವನ್ನು ತಳ್ಳಿ ಹಾಕಿರುವ ಶೋಭಾ ಓಝಾ ಬಿಜೆಪಿ ಚಿತಾವಣೆಯಲ್ಲಿ ರಚನಾ ಈ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಗಳನ್ನು ಪಾರದರ್ಶಕವಾಗಿ ನೀಡಲಾಗಿದೆ, ಅಭ್ಯರ್ಥಿಗಳ ಸಾಮರ್ಥ್ಯ ನೋಡಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.