ಭೀಮ್ ಆಪ್, ಕ್ಯಾಶ್ ಬ್ಯಾಕ್, ರೆಫರ್ರಲ್ ಬೋನಸ್ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ದೇಶದಲ್ಲಿ ಡಿಜಿಟಲ್ ಪಾವತಿ ಕ್ರಾಂತಿಯನ್ನು ಉತ್ತೇಜಿಸಲು ಮತ್ತು ಡಿಜಿಧನ್ ಮೇಳದ ಮೆಗಾ ಡ್ರಾದ...
ಲಕ್ಕಿ ಗ್ರಾಹಕ ಯೋಜನೆಯ ಮೊದಲ ವಿಜೇತರನ್ನು ಸನ್ಮಾನಿಸಿದ ಪ್ರಧಾನಿ.
ಲಕ್ಕಿ ಗ್ರಾಹಕ ಯೋಜನೆಯ ಮೊದಲ ವಿಜೇತರನ್ನು ಸನ್ಮಾನಿಸಿದ ಪ್ರಧಾನಿ.
ನಾಗ್ಪುರ: ದೇಶದಲ್ಲಿ ಡಿಜಿಟಲ್ ಪಾವತಿ ಕ್ರಾಂತಿಯನ್ನು ಉತ್ತೇಜಿಸಲು ಮತ್ತು ಡಿಜಿಧನ್ ಮೇಳದ ಮೆಗಾ ಡ್ರಾದ ಕೆಲವು ವಿಜೇತರನ್ನು ಸನ್ಮಾನಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭೀಮ್-ಆಧಾರ್ ಡಿಜಿಟಲ್ ಪೇಮೆಂಟ್  ವೇದಿಕೆಯನ್ನು ಬಳಸಿಕೊಂಡರು.
ಡಿಜಿಧನ್ ಮೇಳದ ಅಂತಿಮ ಹಂತವಾಗಿ ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿಧನ್ ವ್ಯಾಪಾರ್ ಯೋಜನೆಯ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ವಿತರಿಸಿದರು.
ಲಕ್ಕಿ ಗ್ರಾಹಕ ಯೋಜನೆಯಡಿ ಡಿಜಿಟಲ್ ಪಾವತಿ ಮಾಡಿದ ಗ್ರಾಹಕರಿಗೆ ಮೊದಲ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ 1 ಕೋಟಿ, 50 ಲಕ್ಷ ಮತ್ತು 25 ಲಕ್ಷ ರೂಪಾಯಿ ಪ್ರಶಸ್ತಿ ನೀಡಲಾಗಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಸಣ್ಣ ಕಿರಾಣ ಅಂಗಡಿ ಮಾಲೀಕರ ಪುತ್ರಿ ಶ್ರದ್ಧಾ ಅವರು 1 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಕೂಡ ಮಾಲಾರ್ಪಣೆ ಮಾಡಿದರು.
ನಂತರ ನೆರೆದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭೀಮ್ ಆಪ್ ಬಡಜನರಿಗೆ ಸಹಾಯವಾಗಲಿದೆ. ಈ ದೇಶದ ಬಡವರು ಡಿಜಿಧನ್, ನಿಜಿಧನ್ ಎಂದು ಉಚ್ಚರಿಸಲು ಆರಂಭಿಸುತ್ತಾರೆ. ನಿಮ್ಮ ಮೊಬೈಲ್ ಫೋನ್ ನಿಮ್ಮ ಬ್ಯಾಂಕ್ ಆಗಿ ಪರಿವರ್ತನೆಯಾಗಲಿದೆ. ಭೀಮ್ ಆಪ್ ಪ್ರತಿಯೊಬ್ಬರ ಬಾಳಲ್ಲಿ ಬದಲಾವಣೆ ತರಲಿದೆ ಎಂದರು.
ಭೀಮ್ ಆಪ್ ಮೂಲಕ ಯಾವುದೇ ಭಾರತೀಯನು ಸ್ಮಾರ್ಟ್ ಫೋನ್, ಇಂಟರ್ನೆಟ್, ಡೆಬಿಟ್, ಕ್ರೆಡಿಟ್ ಕಾರ್ಡುಗಳಿಲ್ಲದೆಯೂ ಡಿಜಿಟಲ್ ವ್ಯವಸ್ಥೆ ಮೂಲಕ ಹಣದ ವಹಿವಾಟು ನಡೆಸಬಹುದು. ಈಗಾಗಲೇ 27 ಬ್ಯಾಂಕುಗಳು ಈ ಆಪ್ ನ್ನು ಬಳಸಲು ಮುಂದೆ ಬಂದಿದ್ದು 3,00,000 ವ್ಯಾಪಾರಿಗಳು ಡಿಜಿಟಲ್ ಪಾವತಿ ವಿಧಾನವನ್ನು ಅಳವಡಿಸಲು ಆರಂಭಿಸಿದ್ದಾರೆ. ಗ್ರಾಹಕರು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಭೀಮ್ ಆಪ್ ಮೂಲಕ ಹಣದ ವಹಿವಾಟು ನಡೆಸಬಹುದು. 
ಇದೇ ಸಂದರ್ಭದಲ್ಲಿ ಮೋದಿಯವರು ಎರಡು ಪ್ರೋತ್ಸಾಹಕ ಯೋಜನೆಗಳಾದ ಭೀಮ್ ಕ್ಯಾಶ್ ಬ್ಯಾಕ್ ಮತ್ತು ರೆಫರ್ರಲ್ ಬೋನಸ್ ನ್ನು ಉದ್ಘಾಟಿಸಿದರು. ಇಂದಿನಿಂದ ಆರು ತಿಂಗಳ ಕಾಲ ಸುಮಾರು 495 ಕೋಟಿ ರೂ ಹಣ ಹೂಡುವ ಯೋಜನೆ ಇದಾಗಿದೆ. 
ರೆಫರ್ರಲ್ ಬೋನಸ್ ಯೋಜನೆಯಡಿ ಭೀಮ್ ಆಪ್ ಬಳಕೆದಾರರು ಮತ್ತು ಹೊಸ ಬಳಕೆದಾರರು ಅಂದರೆ ಗ್ರಾಹಕರು ಕ್ಯಾಶ್ ಬೋನಸ್ ನ್ನು ನೇರವಾಗಿ ತಮ್ಮ ಖಾತೆಗಳಲ್ಲಿ ಪಡೆಯುತ್ತಾರೆ. ಪ್ರತಿ ವಹಿವಾಟುದಾರರ ಖಾತೆಗಳಿಗೆ ಸರ್ಕಾರ 10 ರೂಪಾಯಿ ಹೂಡಿಕೆ ಮಾಡುತ್ತದೆ. ಮುಂದಿನ ಅಕ್ಟೋಬರ್ 14ರವರೆಗೆ ಈ ಯೋಜನೆಯಿರುತ್ತದೆ.
ಕ್ಯಾಶ್ ಬ್ಯಾಕ್ ಯೋಜನೆಯಲ್ಲಿ ಭೀಮ್ ಆಪ್ ಬಳಸಿ ಮಾಡಿದ ಪ್ರತಿ ವಹಿವಾಟಿಗೆ ವ್ಯಾಪಾರಿಗಳು ಕ್ಯಾಶ್ ಬ್ಯಾಕ್ ಪಡೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com