ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಭಯೋತ್ಪಾದನೆ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್‌....
ಝಾಕಿರ್ ನಾಯ್ಕ್
ಝಾಕಿರ್ ನಾಯ್ಕ್
ಮುಂಬೈ: ಭಯೋತ್ಪಾದನೆ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್  ನಾಯ್ಕ್‌ ವಿರುದ್ಧ ಗುರುವಾರ ಮುಂಬೈ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಝಾಕಿರ್ ನಾಯಕ್ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ), ಎನ್ಐಎ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿವಿ ಪಾಟೀಲ್ ಅವರು, ನಾಯ್ಕ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದಾರೆ. 
ಕಳೆದ ವರ್ಷ ಕೋಮುವಾದ ಮತ್ತು ಭಯೋತ್ಪಾದನೆ ಪ್ರಚೋದಕ ಭಾಷಣಗಳನ್ನು ಪ್ರಸ್ತುತ ಪಡಿಸಿರುವ ಆರೋಪದಡಿ ಎನ್ಐಎ ಜಾಕಿರ್‌ ನಾಯ್ಕ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಮೂರು ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಆರೋಪಿಯನ್ನು ಭಾರತಕ್ಕೆ ಕರೆ ತರಲು ಇಂಟರ್ ಪೊಲ್ ಸಹಾಯ ಪಡೆಯುವ ಅಗತ್ಯವಿದೆ ಎಂದು ಎನ್ಐಎ ಕೋರ್ಟ್ ಗೆ ತಿಳಿಸಿದೆ.
ಕಳೆದ ಗುರುವಾರ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಿರಾಕರಿಸುತ್ತಿರುವ ಝಾಕಿರ್  ನಾಯ್ಕ್‌ ವಿರುದ್ಧ ದೆಹಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು.
ಇನ್ನು ನಾಯಕ್‌ ಒಡೆತನದ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (ಐಆರ್‌ಎಫ್‌) ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com