ನವದೆಹಲಿ: ರೈಲ್ವೆ ಬಜೆಟ್ ಅನ್ನು ನಾನೇ ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದೇನೆ. ಹಣಕಾಸು ಸಚಿವಾಲಯ ರೈಲ್ವೆ ಬಜೆಟ್ ಅನ್ನು ಕಿತ್ತುಕೊಂಡಿಲ್ಲ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬುಧವಾರ ಹೇಳಿದ್ದಾರೆ.
ಈ ಬಾರಿ ಶತಮಾನದಷ್ಟು ಹಳೆಯದಾದ ರೈಲ್ವೆ ಬಜೆಟ್ ಗೆ ಗುಡ್ ಬೈ ಹೇಳಿ ಫೆಬ್ರವರಿ 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಸಾಮಾನ್ಯ ಬಜೆಟ್ ನೊಂದಿಗೆ ವಿಲೀನಗೊಳಿಸಲಾಗಿದೆ.
ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ನಡೆದ ಸಂವಾದದ ವೇಳೆ ರೈಲ್ವೆ ಬಜೆಟ್ ವಿಲೀನದ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್ ಪ್ರಭು ಅವರು, ಸ್ವತಃ ನಾನೇ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ನೊಂದಿಗೆ ವಿಲೀನಗೊಳಿಸಿದ್ದೇನೆ. ಹಣಕಾಸು ಸಚಿವಾಲಯ ವಿಲೀನ ಮಾಡಿಲ್ಲ ಎಂದರು.
1924ರಿಂದ ಸಂಸತ್ತಿನಲ್ಲಿ ರೈಲ್ವೆ ಬಜೆಟ್ ಅನ್ನು ಪ್ರತ್ಯೆಕವಾಗಿ ಮಂಡಿಸಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ಸಾಮಾನ್ಯ ಬಜೆಟ್ ನೊಂದಿಗೆ ವಿಲೀನಗೊಳಿಸಲಾಗಿದೆ.