ನೈನಿತಾಲ್: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಇವಿಎಂಗಳ ದುರ್ಬಳಕೆಯೇ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಸಂದರ್ಭದಲ್ಲಿ ಉತ್ತರಾಖಂಡ್ ನ ಡೆಹ್ರಾಡೂನ್ ಜಿಲ್ಲೆಯ ವಿಕಾಸನಗರ ವಿಧಾಸಭಾ ಕ್ಷೇತ್ರದಲ್ಲಿ ಬಳಸಿದ ಇವಿಎಂಗಳನ್ನು ಜಪ್ತಿ ಮಾಡಿ, ಸೀಲ್ ಮಾಡವಂತೆ ಉತ್ತರಾಖಂಡ್ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಉತ್ತರಾಖಂಡ್ ಕಾಂಗ್ರೆಸ್ ಅಭ್ಯರ್ಥಿಯೊಬರು ಇವಿಎಂ ಅಕ್ರಮದ ಬಗ್ಗೆ ಆರೋಪ ಮಾಡಿ ಕೋರ್ಟ್ ಮೊರೆಹೋಗಿದ್ದರು. ಚುನಾವಣೆ ವೇಳೆ ಇವಿಎಂಗಳನ್ನು ತೀರುಚಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಇವಿಎಂಗಳನ್ನು ನ್ಯಾಯಾಂಗ ವಶಕ್ಕೆ ಪಡೆದಿದೆ. ಅಲ್ಲದೆ ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗೆ ನೋಟಿಸ್ ಜಾರಿ ಮಾಡಿದೆ.
ಕಳೆದ ಫೆಬ್ರವರಿಯಲ್ಲಿ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಬಳಸಿದ್ದ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಗಳನ್ನು ವಶಕ್ಕೆ ಪಡೆಯುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ.