ನವದೆಹಲಿ: ಸುಪ್ರೀಂ ಕೋರ್ಟ್ ನ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ದೀಪಕ್ ಮಿಶ್ರಾರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಆಗಸ್ಟ್ 27ರಂದು ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ ದೀಪಕ್ ಮಿಶ್ರಾ ಅವರು ನೇಮಕ ಗೊಂಡಿದ್ದಾರೆ.
ನ್ಯಾ ದೀಪಕ್ ಮಿಶ್ರಾ ಅವರು, ನ್ಯಾ. ರಂಗನಾಥ್ ಮಿಶ್ರಾ ಮತ್ತು ನ್ಯಾ. ಜಿಬಿ ಪಟ್ನಾಯಕ್ ನಂತರ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುತ್ತಿರುವ ಮೂರನೇ ಒಡಿಶಾದ ನ್ಯಾಯಮೂರ್ತಿಯಾಗಲಿದ್ದಾರೆ.
ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆ ತೀರ್ಪು ಸೇರಿದಂತೆ ಹಲವು ಪ್ರಕರಣಗಳಲ್ಲಿ ದೀಪಕ್ ಮಿಶ್ರಾ ಮಹತ್ವದ ಆದೇಶಗಳನ್ನು ನೀಡಿದ್ದಾರೆ. 1953ರ ಅಕ್ಟೋಬರ್ 3ರಂದು ಜನಿಸಿದ ನ್ಯಾ. ಮಿಶ್ರಾ ದೆಹಲಿ ಮತ್ತು ಪಾಟ್ನಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.