ಚಂಡೀಗಢ: ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪುತ್ರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರ ಪುತ್ರ ವಿಕಾಸ್ ಬರಾಲಾ ಹಾಗೂ ಆತನ ಸ್ನೇಹಿತ ಆಶೀಶ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಗುರುವಾರ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ಕಳೆದ ವಾರ ಚಂಡೀಗಢದ ಯುವತಿ ವರ್ನಿಕಾ ಕುಂದು ಅವರ ಕಾರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಚಂಡೀಗಢ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ವಿಕಾಸ್ ಹಾಗೂ ಆಶೀಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇಂದು ಇಬ್ಬರು ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಕೋರ್ಟ್ ವಿಕಾಸ್ ಬರಾಲಾ ಹಾಗೂ ಆಶೀಶ್ ನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿದೆ.
ಬಿಜೆಪಿ ನಾಯಕನ ಪುತ್ರ ಹಾಗೂ ಆತನ ಸ್ನೇಹಿತನ ವಿರುದ್ಧ ಐಪಿಸಿ ಸೆಕ್ಷೆನ್ 365 (ಅಪಹರಣ ಯತ್ನ) ಹಾಗೂ 511ರಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಕಳೆದ ವಾರ ಚಂಡೀಗಢದ ಹೆದ್ದಾರಿಯಲ್ಲಿ ವಿಕಾಸ್ ಬರಾಲಾ ಹಾಗೂ ಆತನ ಸ್ನೇಹಿತ ಆಶೀಶ್ ವರ್ನಿಕಾ ಕುಂದು ಅವರ ಕಾರನ್ನು ಹಿಂಬಾಲಿಸಿದ್ದಲ್ಲದೇ, ಆಕೆಯನ್ನು ಅಪಹರಿಸಲು ಯತ್ನಿಸಿದ್ದರು. ಈ ಘಟನೆ ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು.
ಒಂದು ವೇಳೆ ಆರೋಪಿಗಳ ವಿರುದ್ಧದ ಅಪಹರಣ ಯತ್ನ ಆರೋಪ ಸಾಬೀತಾದರೆ ವಿಕಾಸ್ ಬರಾಲಾ ಹಾಗೂ ಆಶೀಶ್ ಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ.