ಹಿ.ಪ್ರ: ಭೂ ಕುಸಿತಕ್ಕೆ ಕೊಚ್ಚಿ ಹೋದ ಬಸ್ಸುಗಳು, 50ಕ್ಕೂ ಹೆಚ್ಚು ಪ್ರಯಾಣಿಕರು ಸಾವು

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕೊಟ್ರೂಪಿ ಪ್ರದೇಶದಲ್ಲಿ ಉಂಟಾದ ಭಾರೀ ಭೂಕುಸಿತದಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸು ಕೊಚ್ಚಿ ಹೋಗಿ ಸುಮಾರು 50 ಮಂದಿ ಮೃತಪಟ್ಟ ಘಟನೆ....
ಭೂಕುಸಿತದಲ್ಲಿ ಕೊಚ್ಚಿಹೋದ ಬಸ್ಸು
ಭೂಕುಸಿತದಲ್ಲಿ ಕೊಚ್ಚಿಹೋದ ಬಸ್ಸು
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕೊಟ್ರೂಪಿ ಪ್ರದೇಶದಲ್ಲಿ ಉಂಟಾದ ಭಾರೀ ಭೂಕುಸಿತದಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸು ಕೊಚ್ಚಿ ಹೋಗಿ ಸುಮಾರು 50 ಮಂದಿ ಮೃತಪಟ್ಟ ಘಟನೆ ಇಂದು ನಸುಕಿನ ಜಾವ ಸಂಭವಿಸಿದೆ.
ಒಂದು ಬಸ್ಸು ಮನಾಲಿಯಿಂದ ಚಂಬಕ್ಕೆ ತೆರಳುತ್ತಿದ್ದರೆ, ಇನ್ನೊಂದು ಬಸ್ಸು ಮನಾಲಿಯಿಂದ ಜಮ್ಮುವಿನ ಕಟ್ರಾಗೆ ಸಂಚರಿಸುತ್ತಿತ್ತು.
ಈ ವಿಷಯವನ್ನು ಖಚಿತಪಡಿಸಿದ ಹಿಮಾಚಲ ಪ್ರದೇಶ ರಾಜ್ಯ ಸಾರಿಗೆ ಸಚಿವ ಜಿ.ಎಸ್.ಬಾಲಿ, ದುರ್ಘಟನೆಯಲ್ಲಿ ಸುಮಾರು 50 ಮಂದಿ ಕೊಚ್ಚಿಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇಂದು ನಸುಕಿನ ಜಾವ 2 ಗಂಟೆಯಿಂದ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇಂದು ಮಧ್ಯರಾತ್ರಿ 12.35ರ ಸುಮಾರಿಗೆ ಬಸ್ಸುಗಳು ಭೂಕುಸಿತಕ್ಕೆ ಕೊಚ್ಚಿ ಹೋದ ಬಗ್ಗೆ ಮಂಡಿ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿತು. ತಕ್ಷಣ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 250 ಮೀಟರ್ ಸುತ್ತ ಭೂ ಕುಸಿತ ಉಂಟಾಗಿ ಇದೀಗ ಅಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಭೂ ಕುಸಿತದ ಅವಶೇಷಗಳಡಿಯಲ್ಲಿ ಅನೇಕರು ಸಿಕ್ಕಿಹಾಕಿಕೊಂಡಿದ್ದರಿಂದ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯ ಸಹಾಯವನ್ನು ಮಂಡಿ ಜಿಲ್ಲಾಡಳಿತ ಕೋರಿದೆ. ಮಂಡಿ ಜಿಲ್ಲಾಧಿಕಾರಿ, ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ ಆಗಾಗ ಭೂಕುಸಿತ ಉಂಟಾಗುವುದು, ಬಂಡೆಗಳು ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗುವುದು ಸಂಚಾರಕ್ಕೆ ಅಪಾಯವಾಗಿದೆ. ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಚಂಡೀಗಢ-ಶಿಮ್ಲಾ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಜನರಿಗೆ ದುಸ್ತರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com