ಶ್ರೀನಗರ: ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಾರ್ಯಾಚರಣೆಯ ಕಮಾಂಡರ್ ಯಾಸೀನ್ ಯಟ್ಟೂ ಹತ್ಯೆಯಾದ ನಂತರ ಆತನ ಸ್ಥಾನಕ್ಕೆ ಮೊಹಮ್ಮದ್ ಬಿನ್ ಖಾಸಿಂನನ್ನು ನೇಮಿಸಲಾಗಿದೆ.
ನಿನ್ನೆ ಕಾಶ್ಮೀರದ ಶೋಫಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಯಟ್ಟೂನನ್ನು ಎನ್ ಕೌಂಟರ್ ಮಾಡಿದ್ದವು. ಮಾರನೇ ದಿನವೇ ಪಾಕಿಸ್ತಾನ ಆಕ್ರಮಿತ ಮುಜಾಫರ್ ಬಾದ್ ನಲ್ಲಿ ಸಯೀದ್ ಸಲಾಹುದ್ದೀನ್ ನೇತೃತ್ವದಲ್ಲಿ ಉಗ್ರ ಸಂಘಟನೆಯ ಕಮಾಂಡ್ ಕೌನ್ಸಿಲ್ ಸಭೆ ನಡೆಸಿ ಕಾಶ್ಮೀರದ ಕಮಾಂಡರ್ ಆಗಿ ಖಾಸಿಂನನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದ ಆರಂಭವಾಗಿದ್ದ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಎನ್ ಕೌಂಟರ್ ನಲ್ಲಿ ಯಟ್ಟೂ ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಈ ವೇಳೆ ಇಬ್ಬರು ಯೋಧರು ಸಹ ಹುತಾತ್ಮರಾಗಿದ್ದರು.