ಚಂಡೀಗಢ: ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲ ಪುತ್ರ ವಿಕಾಸ್ ಬರಾಲ ಅವರು ಯುವತಿಯೊಬ್ಬರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಬೆನ್ನಲ್ಲೇ ಈಗ ಚಂಡೀಗಢದಲ್ಲಿ ಮತ್ತೊಬ್ಬ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ.
ಕಳೆದ ರಾತ್ರಿ ನಾನು ಮಾರ್ಕೆಟ್ ನಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಸೆಕ್ಟರ್ 36ರಿಂದ ಸೆಕ್ಟರ್ 40 ಬರುವವರೆಗೆ ಮೂವರು ವ್ಯಕ್ತಿಗಳು ಕಾರಿನಲ್ಲಿ ನನ್ನನ್ನು ಹಿಂಬಾಲಿಸುತ್ತಿದ್ದರು ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆ ಮಾರುಕಟ್ಟೆಯಲ್ಲಿ ಹಣ್ಣು ಖರೀದಿಸಿ ವಾಪಸ್ ಬರುತ್ತಿರುವಾಗ ಮೂವರು ವ್ಯಕ್ತಿಗಳು ಆಕೆಯನ್ನು ಹಿಂಬಾಲಿಸಿದ್ದಾರೆ ಎಂದು ಚಂಡೀಗಢ ಉಪ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಯಾದವ್ ಅವರು ತಿಳಿಸಿದ್ದಾರೆ.
ಹಿಸಾರ್ ಮೂಲಕ ಯುವತಿ ನಗರದ ಪಿಜಿಯೊಂದರಲ್ಲಿ ವಾಸವಾಗಿದ್ದು, ನಿನ್ನೆ ರಾತ್ರಿ ತಮನ್ನು ಹಿಂಬಾಸಿದ ಕಾರಿನ ನಂಬರ್ ಸಹಿತ ದೂರು ನೀಡಿದ್ದಾರೆ ಎಂದು ಯಾದವ್ ಹೇಳಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷೆನ್ 341, 354ಡಿ ಅಡಿ ಕೇಸ್ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಡಿಎಸ್ಪಿ ತಿಳಿಸಿದ್ದಾರೆ.