ಮಾಲ್ದಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಪೊಲೀಸರು ಅಕ್ರಮ ಬಂದೂಕು ಕಾರ್ಖಾನೆಯೊಂದನ್ನು ಪತ್ತೆ ಹಚ್ಚಿದ್ದು, ಅದರಲ್ಲಿದ್ದ 48 ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.
ಕಲಿಚಕ್ ಪೊಲೀಸ್ ಠಾಣಾ ವ್ಯಾಪ್ತಿಯ ದೆಬಿಪುರ್ ದಲ್ಲಿರುವ ಕಾರ್ಖಾನೆಯೊಂದಲ್ಲಿ 48 ಸಿದ್ಧವಾಗಿದ್ದ ಬಂದೂಕುಗಳನ್ನು ಹಾಗೂ ಭಾರಿ ಪ್ರಮಾಣದ ಸಿದ್ಧತಾ ಹಂತದಲ್ಲಿದ್ದ ಬಂದೂಕುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್ನಬ್ ಘೋಷ್ ಅವರು ತಿಳಿಸಿದ್ದಾರೆ.
9ಎಂಎಂ ಮತ್ತು 7ಎಂಎಂ ಬಂದೂಕುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಮನೆ ಮಾಲೀಕ ಸೇರಿದಂತೆ ಅಕ್ರಮವಾಗಿ ಮನೆಯೊಂದರಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆ ನಡೆಸುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಘೋಷ್ ಹೇಳಿದ್ದಾರೆ.
ದಾಳಿಯ ವೇಳೆ 50 ಸಾವಿರ ರುಪಾಯಿ ಮೌಲ್ಯದ ನಕಲಿ ನೋಟ್ ಗಳನ್ನು ಸಹ ಜಪ್ತಿ ಮಾಡಲಾಗಿದ್ದು, ಶಸ್ತ್ರಾಸ್ತ್ರಗಳನ್ನು ನೆರೆ ರಾಜ್ಯಗಳಿಗೆ ಪೂರೈಕೆ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.