ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧದ ಟಿಕಾಪ್ರಹಾರ ಮುಂದುವರೆಸಿದ್ದು, ಮೇಕ್ ಇನ್ ಇಂಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೇಳುತ್ತಿದೆ. ಆದರೆ ದೇಶದಲ್ಲಿ ಸಿಗುತ್ತಿರುವ ಬಹುತೇಕ ವಸ್ತುಗಳು ಚೀನಾ ಉತ್ಪಾದಿತವೇ ಆಗಿದೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಎನ್ನುತ್ತಿದ್ದಾರೆ, ಆದರೆ ನಮಗೆ ಬೇಕಾಗುರುವುದು ಸಚ್ (ನಿಜ) ಭಾರತ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜೆಡಿಯು ನಾಯಕ ಶರದ್ ಯಾದವ್ ಅವರು ಆಯೋಜಿಸಿದ್ದ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ರಾಹುಲ್ ಗಾಂಧಿ 2014 ರ ಚುನಾವಣೆಯಲ್ಲಿ ಬಿಜೆಪಿ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಕಪ್ಪುಹಣ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಸ್ವಚ್ಛ್ ಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ, ಅವರೆಲ್ಲಿ ಹೋದರೂ ಸುಳ್ಳು ಹೇಳುತ್ತಾರೆ, ಆದ್ದರಿಂದ ನಮಗೆ ಸಚ್ ಭಾರತ ಬೇಕು ಎಂದು ರಾಹುಲ್ ಹೇಳಿದ್ದಾರೆ.