ತ್ರಿವಳಿ ತಲಾಖ್: ಕಾನೂನು ಹೋರಾಟದ ಹೆಜ್ಜೆ ಗುರುತುಗಳು

ಮುಸ್ಲಿಂ ಧರ್ಮದಲ್ಲಿರುವ ತ್ರಿವಳಿ ತಲಾಖ್ ಬಗ್ಗೆ ಇಂದು ಮಹತ್ವಪೂರ್ಣ ಆದೇಶ ನೀಡಿರುವ ಸುಪ್ರೀಂ ಕೋರ್ಟ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮುಸ್ಲಿಂ ಧರ್ಮದಲ್ಲಿರುವ ತ್ರಿವಳಿ ತಲಾಖ್ ಬಗ್ಗೆ ಇಂದು ಮಹತ್ವಪೂರ್ಣ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಆರು ತಿಂಗಳವರೆಗೆ ಪದ್ಧತಿಯನ್ನು ರದ್ದುಗೊಳಿಸಿದೆ. ನಂತರ ಸರ್ಕಾರ ಕಾನೂನು ತರಬೇಕು ಎಂದು ಹೇಳಿದೆ.
ತ್ರಿವಳಿ ತಲಾಖ್ ವಿವಾದವನ್ನು ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋದವರು ಉತ್ತರಾಖಂಡ್ ಮೂಲದ ಶಯರಾ ಬಾನೊ ಎಂಬುವವರು. 
ತ್ರಿವಳಿ ತಲಾಖ್ ಮುಸ್ಲಿಂ ಧರ್ಮದಲ್ಲಿರುವ ಒಂದು ಪದ್ಧತಿಯಾಗಿದ್ದು, ಅದರಂತೆ ಪತಿ ಮೂರು ಬಾರಿ ತಲಾಖ್ ಎಂದು ಬಾಯಲ್ಲಿ ಹೇಳಿ ಪತ್ನಿಗೆ ವಿಚ್ಛೇದನ ನೀಡಬಹುದು. ಮೋದಿ ಸರ್ಕಾರ ಈ ಪದ್ಧತಿಗೆ ವಿರೋಧ ವ್ಯಕ್ತಪಡಿಸಿದ್ದು, ತ್ರಿವಳಿ ತಲಾಖ್ ನ್ನು ವಿರೋಧಿಸುವವರಿಗೆ ಬಲ ಸಿಕ್ಕಿದಂತಾಗಿತ್ತು.
ಮುಸ್ಲಿಂ ಧರ್ಮದಲ್ಲಿರುವ ತ್ರಿವಳಿ ತಲಾಖ್, ನಿಕಾಹ್ ಹಲಾಲ್ ಮತ್ತು ಬಹುಪತ್ನಿತ್ವ ಸಂವಿಧಾನ ವಿಧಿ 25(1)ರಡಿ ಮಹಿಳೆಯರ ಸಮಾನತೆಯ ಹಕ್ಕು ಮತ್ತು ಗೌರವವನ್ನು ಉಲ್ಲಂಘಿಸುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ. 
ಇಲ್ಲಿಯವರೆಗೆ ನ್ಯಾಯಾಲಯದಲ್ಲಿ ಯಾವ ರೀತಿಯಲ್ಲಿ ಕಾನೂನು ಹೋರಾಟ ನಡೆಯಿತು ಎಂಬುದನ್ನು ತಿಳಿದುಕೊಳ್ಳೋಣ.
ಕಳೆದ ಮೇ 11ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ನ್ಯಾಯಪೀಠ, ಅರ್ಜಿ ವಿಚಾರಣೆ ಆರಂಭಿಸಿತು. ತ್ರಿವಳಿ ತಲಾಖ್ ನ ಸಾಂವಿಧಾನಿಕ ಮೌಲ್ಯ ಮತ್ತು ಅದು ಇಸ್ಲಾಂ ಧರ್ಮಕ್ಕೆ ಅಗತ್ಯವೇ ಎಂಬ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪಿತೃ ಪ್ರಧಾನ ಹೊಂದಿರುವ ಮುಸಲ್ಮಾನರಲ್ಲಿ ಮಹಿಳೆಯರಿಗೆ ಕೂಡ ಸಮಾನ ಸ್ವಾತಂತ್ರ್ಯ ನೀಡಬೇಕು, ತಲಾಖ್ ಎಂಬ ಅನಿಷ್ಟ ಆಚರಣೆಯನ್ನು ತೆಗೆದುಹಾಕಬೇಕೆಂದು, ಅದು ಅಸಂವಿಧಾನಿಕವೆಂದು ಘೋಷಿಸಬೇಕೆಂದು  ಉತ್ತರಾಖಂಡ್ ಮೂಲದ ಬೊನೊ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. 
37 ವರ್ಷದ ಶಯರಾ ಬೊನೊ ಉತ್ತರಾಖಂಡ್ ನ ಉದಮ್ ಸಿಂಗ್ ನಗರ್ ನಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದು ತಾವು ತಮ್ಮ ಪತಿಯ ಒತ್ತಡದಿಂದ 6 ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಗಿ ಹೇಳಿದ್ದಾರೆ.
2015ರಲ್ಲಿ ಬೊನೊಗೆ ಅವರ ಪತಿ ಮೂರು ಬಾರಿ ತಲಾಖ್, ತಲಾಖ್, ತಲಾಖ್ ಎಂದು ಪತ್ರದಲ್ಲಿ ಬರೆದುಕೊಟ್ಟಿದ್ದರಂತೆ. ಇದರಿಂದ ನೊಂದು ಕೊನೆಗೂ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.
ಅಕ್ಟೋಬರ್ 16,2015: ಮುಸ್ಲಿಂ ಧರ್ಮದಲ್ಲಿ ಮಹಿಳೆಯರು ಭಾರೀ ಲಿಂಗ ತಾರತಮ್ಯವನ್ನು ಹೊಂದಿದ್ದಾರೆ, ವಿಚ್ಛೇದನ ವಿಷಯದಲ್ಲಿ ಅವರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಕ್ತ ನ್ಯಾಯಪೀಠ ಸ್ಥಾಪಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಕೋರಿಕೆ.
2016, ಫೆಬ್ರವರಿ 5: ತ್ರಿವಳಿ ತಲಾಖ್, ನಿಖಾ ಹಲಾಲಾ ಮತ್ತು ಬಹುಪತ್ನಿತ್ವದ ಸಾಂವಿಧಾನಿಕ ಮೌಲ್ಯವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿ ವಿಚಾರಣೆಗೆ ಅಟೊರ್ನಿ ಜನರಲ್ ಮುಕುಲ್ ರೊಹಟ್ಗಿಗೆ ಸುಪ್ರೀಂ ಕೋರ್ಟ್ ನಿರ್ದೇಶನ.
2016, ಮಾರ್ಚ್ 28: ಮಹಿಳೆ ಮತ್ತು ಕಾನೂನು ಬಗ್ಗೆ ಉನ್ನತ ಮಟ್ಟದ ತಂಡದ ವರದಿಯ ಪ್ರತಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ. 
2016, ಜೂನ್ 29: ಸಾಂವಿಧಾನಿಕ ಚೌಕಟ್ಟಿನೊಳಗೆ  ಮುಸಲ್ಮಾನರಲ್ಲಿರುವ ತ್ರಿವಳಿ ತಲಾಖ್ ನ್ನು ಪರೀಕ್ಷಿಸುವಂತೆ ಸುಪ್ರೀಂ ಕೋರ್ಟ್ ಆದೇಶ.
2016, ಅಕ್ಟೋಬರ್ 7: ಭಾರತದ ಸಂವಿಧಾನ ಇತಿಹಾಸದಲ್ಲಿ ತ್ರಿವಳಿ ತಲಾಖ್ ನ್ನು ಸುಪ್ರೀಂ ಕೋರ್ಟ್ ನಲ್ಲಿ ವಿರೋಧಿಸಿದ ಕೇಂದ್ರ ಸರ್ಕಾರ. ಲಿಂಗ ಸಮಾನತೆ ಮತ್ತು ಜಾತ್ಯತೀತತೆಗೆ ಒತ್ತಾಯ.
ಫೆಬ್ರವರಿ 14, 2017: ಮುಖ್ಯ ವಿಷಯದ ಜೊತೆಗೆ ಹಲವು ಸಂವಾಧಾತ್ಮಕ ಮನವಿಯನ್ನು ಸೇರಿಸಲು ಸುಪ್ರೀಂ ಕೋರ್ಟ್ ಅವಕಾಶ.
ಫೆಬ್ರವರಿ 16, 2017: ತ್ರಿವಳಿ ತಲಾಖ್ ವಿಷಯದ ಕುರಿತು ವಿಚಾರಣೆ ನಡೆಸಲು ಐದು ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠ ರಚನೆ.
ಮಾರ್ಚ್ 27,2017: ತ್ರಿವಳಿ ತಲಾಖ್ ವಿರುದ್ಧದ ಮನವಿ ಪುರಸ್ಕೃತವಲ್ಲ ಯಾಕೆಂದರೆ ಈ ವಿಷಯ ನ್ಯಾಯಾಂಗದ ಹೊರಗಿನದ್ದು ಎಂದು ಅಖಿಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ ಗೆ ಹೇಳಿಕೆ.
ಮಾರ್ಚ್ 30, 2017: ಈ ವಿಷಯ ಗಂಭೀರವಾದದ್ದು ಮತ್ತು ಮುಸ್ಲಿಂ ಜನಾಂಗದ ಮಹಿಳೆಯರ ಭಾವನೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿ ಮೇ 11ರಿಂದ ಸಾಂವಿಧಾನ ಪೀಠ ವಿಚಾರಣೆ ಆರಂಭ.
ಮೇ 11, 2017: ಪ್ರತಿ ದಿನ ವಿಚಾರಣೆ ಆರಂಭಿಸಿದ ಸಂವಿಧಾನ ಪೀಠ.
ಮೇ 18, 2017: ಆರು ದಿನಗಳ ಕಾಲ ಸತತ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಪೀಠ, ಕಾಯ್ದಿರಿಸಿದ ತೀರ್ಪು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com