ಚೆನ್ನೈ: ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಸರ್ಕಾರಿ ಮುಖ್ಯ ಸಚೇತಕ ಎಸ್ ರಾಜೇಂದ್ರನ್ ಅವರನ್ನು ಪಕ್ಷದ ಪ್ರಮುಖ ಹುದ್ದೆಯಿಂದ ಶನಿವಾರ ವಜಾಗೊಳಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ದಿನಕರನ್ ಬೆಂಬಲಕ್ಕೆ ನಿಂತಿದ್ದ 19 ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸುವಂತೆ ಪತ್ರ ಬರೆದಿದ್ದ ರಾಜೇಂದ್ರನ್ ಅವರನ್ನು ಇಂದು ಅರಿಯಲೂರ್ ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಗಿದೆ.
ರಾಜೇಂದ್ರನ್ ಅವರನ್ನು ಎಐಎಡಿಎಂಕೆ ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿರುವ ದಿನಕರನ್ ಅವರು, ಅವರ ಸ್ಥಾನಕ್ಕೆ ಪಿ ಮುತ್ತಿಯನ್ ಅವರನ್ನು ನೇಮಕ ಮಾಡಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರ ವಿರುದ್ಧ ತಿರುಗಿಬಿದ್ದು ದಿನಕರನ್ ಬೆಂಬಲಕ್ಕೆ ನಿಂತಿದ್ದ 19 ಶಾಸಕರನ್ನು ಅನರ್ಹಗೊಳಿಸುವಂತೆ ರಾಜೇಂದ್ರನ್ ಅವರು ಕಳೆದ ಗುರುವಾರ ಸ್ಪೀಕರ್ ಪಿ ಧನಪಾಲ್ ಅವರಿಗೆ ಪತ್ರ ಬರೆದಿದ್ದರು.