ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಟಿಟಿವಿ ದಿನಕರನ್ ವಜಾ

ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರಿಗೆ ತಿರುಗೇಟು ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು....
ಟಿಟಿವಿ ದಿನಕರನ್
ಟಿಟಿವಿ ದಿನಕರನ್
ಚೆನ್ನೈ: ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರಿಗೆ ತಿರುಗೇಟು ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು, ದಿನಕರನ್ ಅವರನ್ನು ಈಗಾಗಲೇ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಸೋಮವಾರ ಹೇಳಿದ್ದಾರೆ.
ಇಂದು ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಎಐಎಡಿಎಂಕೆ ಸಭೆಯಲ್ಲಿ ದಿನಕರನ್ ಅವರನ್ನು ಆಗಸ್ಟ್ 10ರಂದೇ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿರುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ. 
ಎಐಎಡಿಎಂಕೆ ಮುಖ್ಯಸ್ಥೆ ದಿ.ಜಯಲಲಿತಾ ಅವರು ಪಕ್ಷದ ಹುದ್ದೆಗಳಿಗೆ ನೇಮಕ ಮಾಡಿದ್ದ ವ್ಯಕ್ತಿಗಳನ್ನು ವಜಾಗೊಳಿಸುವ ಅಧಿಕಾರ ಅಥವಾ ಅರ್ಹತೆ ದಿನಕರನ್ ಅವರಿಗೆ ಇಲ್ಲ. ಹೀಗಾಗಿ ಅವರು ಪಕ್ಷದಲ್ಲಿ ಅವರು ಮಾಡಿದ ಬದಲಾವಣೆಗೆ ಯಾವುದೇ ಮಾನ್ಯತೆ ಇಲ್ಲ ಎಂದು ಸಭೆ ನಿರ್ಣಯ ಕೈಗೊಂಡಿದೆ.
ಸಭೆಯಲ್ಲಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಂಬಂಧ ಜನರಲ್ ಕೌನ್ಸಿಲ್ ಸಭೆ ಕರೆಯಲು ನಿರ್ಧರಿಸಲಾಗಿದೆ.
ತಮಗೆ 21 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದ ಶಶಿಕಲಾ ಸಂಬಂಧಿಯಾಗಿರುವ ದಿನಕರನ್ ಅವರು ಮುಖ್ಯಮಂತ್ರಿ ಪಳನಿಸ್ವಾಮಿ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಇತ್ತೀಚಿಗೆ ಪಕ್ಷದ ಕೆಲವು ಜಿಲ್ಲಾ ಕಾರ್ಯದರ್ಶಿಗಳನ್ನು ವಜಾಗೊಳಿಸಿ, ಆ ಸ್ಥಾನಕ್ಕೆ ತಮ್ಮ ಆಪ್ತರನ್ನು ನೇಮಕ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com