ಅನುಪಮ ಗುಲಾಟಿ ಕೊಲೆ ಪ್ರಕರಣ: ಪತಿ ರಾಜೇಶ್ ಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ
36 ವರ್ಷದ ಹೆಂಡತಿಯನ್ನು ಉಸಿರುಕಟ್ಟಿಸಿ ಕೊಂದು ನಂತರ ಅವಳ ದೇಹವನ್ನು ಎಲೆಕ್ಟ್ರಿಕ್ ಸಾ ಬಳಸಿ 70 ತುಂಡುಗಳನ್ನಾಗಿ ಮಾಡಿ ಫ್ರೀಜರ್‌ನಲ್ಲಿಟ್ಟಿದ್ದ ದೋಷಿ ರಾಜೇಶ್ ಗುಲಾಟಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ.
ಡೆಹರಾಡೂನ್: 36 ವರ್ಷದ ಹೆಂಡತಿಯನ್ನು ಉಸಿರುಕಟ್ಟಿಸಿ ಕೊಂದು ನಂತರ ಅವಳ ದೇಹವನ್ನು ಎಲೆಕ್ಟ್ರಿಕ್ ಸಾ ಬಳಸಿ 70 ತುಂಡುಗಳನ್ನಾಗಿ ಮಾಡಿ ಫ್ರೀಜರ್‌ನಲ್ಲಿಟ್ಟಿದ್ದ ದೋಷಿ ರಾಜೇಶ್ ಗುಲಾಟಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ.
2010ರಲ್ಲಿ ನಡೆದ ಈ ಕ್ರೂರ ಕೊಲೆ ಕಂಡು ಡೆಹರಾಡೂನ್ ಬೆಚ್ಚಿ ಬಿದ್ದಿತ್ತು. ಈ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಭಾರತೀಯ ದಂಡ ಸಂಹಿತೆ 302(ಕೊಲೆ) ಹಾಗೂ 201(ಸಾಕ್ಷಿಯನ್ನು ನಾಶ ಪಡಿಸಲು ಯತ್ನಿಸಿದ್ದು) ಪ್ರಕಾರ ರಾಜೇಶ್ ದೋಷಿ ಎಂದಿರುವ ಕೋರ್ಟ್ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ದೂರುದಾರ ಸುಜನ್ ಪ್ರಧಾನ್ ಅವರ ಸಲಹಾಕಾರ ಎಸ್.ಕೆ ಮೊಹಂತಿ, "ಶಿಕ್ಷೆಗೆ ಸಂಬಂಧಿಸಿದಂತೆ ಶುಕ್ರವಾರ ವಾದಗಳು ನಡೆಯುತ್ತವೆ, ನಂತರ ರಾಜೇಶ್ ಗುಲಾಟಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಲಾಗುತ್ತದೆ." ಎಂದು ತಿಳಿಸಿದ್ದಾರೆ.
1999ರಲ್ಲಿ ರಾಜೇಶ್ ಹಾಗೂ ಅನುಪಮ ಮದುವೆಯಾಗಿದ್ದರು. ಮದುವೆಯಾದ ಬಳಿಕ ಕೆಲ ವರ್ಷಗಳ ಕಾಲ ಅಮೇರಿಕದಲ್ಲಿ ನೆಲೆಸಿದ್ದ ದಂಪತಿ ನಂತರ ಭಾರತಕ್ಕೆ ವಾಪಸಾಗಿದ್ದರು. ಭಾರತಕ್ಕೆ ಬಂದ ಮೇಲೆ ರಾಜೇಶ್‌ಗೆ ಕೋಲ್ಕೊತ್ತಾದ ಯುವತಿಯೊಬ್ಬಳ ಜತೆ ಸಂಬಂಧವಿದೆಯೆಂದು ಆತನ ಪತ್ನಿ ಜಗಳವಾಡಿದ್ದಳು.
ಅಕ್ಟೋಬರ್ 17 ರಂದು ರಾಜೇಶ್ ಹಾಗೂ ಆತನ ಪತ್ನಿ ನಡುವೆ ಮಾತಿಗೆ ಮಾತು ಬೆಳೆದು ಕೋಪದಿಂದ ರಾಜೇಶ್ ಪತ್ನಿಗೆ ಹೊಡೆಯುತ್ತಾನೆ. ಆ ಏಟಿನ ರಭಸಕ್ಕೆ ಆಕೆಯ ತಲೆ ಗೋಡೆಗೆ ತಗುಲಿ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಆಗ ಆಕೆಯ ಬಾಯಿ, ಮೂಗಿಗೆ ಹತ್ತಿಯನ್ನು ತುರುಕಿ ನಂತರ ದಿಂಬಿನಿಂದ ಉಸಿರುಕಟ್ಟಿಸಿ ಸಾಯಿಸುತ್ತಾನೆ.
ನಂತರ ಮಾರುಕಟ್ಟೆಗೆ ಹೋಗಿ ಎಲೆಕ್ಟ್ರಿಕ್ ಸಾ ತಂದು ಆಕೆಯ ದೇಹವನ್ನು 70 ತುಂಡುಗಳಾಗಿ ಕತ್ತರಿಸಿ, ಪಾಲಿಥೀನ್ ಚೀಲದಲ್ಲಿ ತುಂಬಿ ಫ್ರೀಜರ್‌ನಲ್ಲಿ ಇಟ್ಟು ಬಿಡುತ್ತಾನೆ. ಅಷ್ಟೇ ಅಲ್ಲದೆ ಪ್ರತಿದಿನವೂ ದೇಹದ ಒಂದೊಂದು ಭಾಗವನ್ನು ಕವರ್‌ನಲ್ಲಿ ತುಂಬಿ ಬೇರೆ-ಬೇರೆ ಕಡೆ ಎಸೆದು ಬರುತ್ತಿದ್ದ.
ರಾಜೇಶ್ ತನ್ನ ಮಕ್ಕಳಿಗೆ ತಾಯಿ ದೆಹಲಿಯಲ್ಲಿರುವ ಅಜ್ಜಿ ಮನೆಗೆ ಹೋಗಿದ್ದಾಳೆ ಎಂದು ಹೇಳಿದ್ದ.
ಒಮ್ಮೆ ಅನುಪಮಾಳ ಸಹೋದರ ತಂಗಿಯ ಮನೆಗೆ ಬಂದಾಗ ಆತನನ್ನು ಒಳಕ್ಕೂ ಬರಲು ಬಿಡದೆ ಜಗಳವಾಡಿದ್ದ ರಾಜೇಶ್ ವರ್ತನೆ ನೋಡಿ ಆತ ತಂಗಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ.
ಆಕೆ ಏನಾದಳು ಎಂದು ವಿಚಾರಿಸಿದಾಗ ಈ ಭಯಾನಕ ಕೊಲೆ ಬೆಳಕಿಗೆ ಬಂದಿತ್ತು.