ಕೇಂದ್ರ ಸಂಪುಟ ವಿಸ್ತರಣೆ: ರಾಜೀವ್ ಪ್ರತಾಪ್, ಉಮಾ ಭಾರತಿ ಸೇರಿ ಐವರು ಸಚಿವರಿಗೆ ಕೊಕ್?

ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರುವಾರ ಹಲವು ಸಚಿವರ ರಾಜೀನಾಮೆ ಪಡೆದಿದ್ದಾರೆ. ಸಂಪುಟದಿಂದ ಕೈಬಿಡುವ ಸಚಿವರ ಜೊತೆ ಪ್ರತ್ಯೇಕವಾಗಿ...
ಉಮಾಭಾರತಿ, ರಾಜೀವ್ ಪ್ರತಾಪ್ ರುಡಿ ಮತ್ತು ನಿರ್ಮಲಾ ಸೀತಾರಾಮನ್
ಉಮಾಭಾರತಿ, ರಾಜೀವ್ ಪ್ರತಾಪ್ ರುಡಿ ಮತ್ತು ನಿರ್ಮಲಾ ಸೀತಾರಾಮನ್
ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರುವಾರ ಹಲವು ಸಚಿವರ ರಾಜೀನಾಮೆ ಪಡೆದಿದ್ದಾರೆ. ಸಂಪುಟದಿಂದ ಕೈಬಿಡುವ ಸಚಿವರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿರುವ ಶಾ, ರಾಜಿನಾಮೆ ನೀಡುವಂತೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆಯ ರಾಜ್ಯ ಸಚಿವ ರಾಜೀವ್‌ ಪ್ರತಾಪ್‌ ರೂಢಿ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ಸಚಿವ ಕಲ್‌ರಾಜ್‌ ಮಿಶ್ರಾ, ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಸಂಜೀವ್‌ ಬಾಲ್ಯಾನ್, ಉಮಾಭಾರತಿ, ಗಿರಿರಾಜ್ ಸಿಂಗ್  ಅವರನ್ನು ಸಂಪುಟದಿಂದ ಕೈ ಬಿಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರತಾಪ್ ರುಡಿ, ಗಿರಿರಾಜ್ ಸಿಂಗ್, ಮತ್ತು ಸಂಜೀವ್ ಬಾಲ್ಯಾನ್ ಈಗಾಗಲೇ ತಮ್ಮ ರಾಜಿನಾಮೆ ಪತ್ರವನ್ನು ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ ಎನ್ ಡಿ ಎ ಸರ್ಕಾರ ನೀಡಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸುವಲ್ಲಿ ಈ ಸಚಿವರು ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜಿನಾಮೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ,
ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಕೂಡ ಉತ್ತಮ ಕಾರ್ಯಕ್ಷಮತೆ ತೋರದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ರಾಜಿನಾಮೆ ಕೇಳಿದ್ದಾರೆ ಎನ್ನಲಾಗಿದೆ.  ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆ ಸ್ವಚ್ಛ ಗಂಗಾ ಯೋಜನೆ ಅನುಷ್ಠಾನ ಗೊಳಿಸುವಲ್ಲಿ ಉಮಾ ಭಾರತಿ ವಿಫಲರಾಗಿರುವ ಕಾರಣ ರಾಜಿನಾಮೆ ಕೇಳಲಾಗಿದೆ, ಇನ್ನೂ ಉಮಾ ಭಾರತಿ ತಮ್ಮ ಆರೋಗ್ಯದ ಕಾರಣ ನೀಡಿ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಿರ್ಮಲಾ ಸೀತರಾಮ್ ಪಕ್ಷದ ಕೆಲಸಗಳಿಗೆ ಮರಳುವ ಸಾಧ್ಯತೆಯಿದೆ. ಅಮಿತ್ ಶಾ ಅವರ ಮಹಾತ್ವಕಾಂಕ್ಷೆಯ ಮಿಷನ್ ಸೌತ್ ಅಜೆಂಡಾದಲ್ಲಿ ನಿರ್ಮಲಾ ಸೀತಾರಾಂ ಗೆ ಪ್ರಮುಖ ಹುದ್ದೆ ನೀಡುವ ಸಾಧ್ಯತೆಯಿದೆ .
ಇನ್ನೂ ಸತತ ರೈಲು ಅಪಘಾತಗಳಿಂದ ಮನನೊಂದಿರುವ ಸಚಿವ ಸುರೇಶ್ ಪ್ರಭು ಕೂಡ ರಾಜಿನಾಮೆ ನೀಡಲು ಬಯಸಿದ್ದರು. ಉತ್ಕಲ್ ಎಕ್ಸ್ ಪ್ರೆಸ್ ದುರಂತದ ನಂತರ ರಾಜಿನಾಮೆ ನೀಡಲು ಮುಂದಾಗಿದ್ದ ಸುರೇಶ್ ಪ್ರಭು ಅವರನ್ನು ಪ್ರಧಾನಿ ಮೋದಿ ಅವರೇ ತಡೆದಿದ್ದರು, ಆದೆರ ಇತ್ತೀಚಿನ ಬೆಳವಣಿಗೆಗಳ ನಂತರ ಸುರೇಶ್ ಪ್ರಭು ಅವರನ್ನು ಸಂಪುಟದಿಂದ ಕೈ ಬಿಡುವ ಬದಲಾಗಿ  ವೆಂಕಯ್ಯ ನಾಯ್ಡು ರಾಜಿನಾಮೆಯಿಂದ ತೆರವಾಗಿರುವ ಪರಿಸರ ಖಾತೆ ನೀಡಲಾಗುವುದು ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ರೈಲ್ವೆ ಕಾತೆ ಹೊಣೆಗಾರಿಕೆ ನೀಡಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ.
ಅರುಣ್ ಜೈಟ್ಲಿ, ಸ್ಮೃತಿ ಇರಾನಿ, ನರೇಂದ್ರ ತೋಮಾರ್ , ಹರ್ಷವರ್ಧನ್ ಅವರಿಗೆ ಹೆಚ್ಚಿನ ಹೊಣೆಗಾರಿಕೆ ನೀಡುವ ಸಾಧ್ಯತೆಯಿದೆ. ಎನ್‌ಡಿಎ ಮಿತ್ರಪಕ್ಷವಾಗಿ ಸೇರ್ಪಡೆಯಾಗಿರುವ ಜೆಡಿಯು ಸಂಪುಟದಲ್ಲಿ ಸ್ಥಾನ ಪಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಇನ್ನೂ ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಅವರ ಸೂಚನೆಯಂತೆ ಎಐಎಡಿಎಂಕೆ ಪಕ್ಷ ಒಂದಾಗಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯಲ್ಲಿ  ಎಐಎಡಿಎಂಕೆ  ಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com