ಆರ್ ಕೆ ನಗರ ಉಪಚುನಾವಣೆ: ವಿಶಾಲ್ ನಾಮಪತ್ರ ತಿರಸ್ಕೃತ, 'ಪ್ರಜಾಪ್ರಭುತ್ವದ ಕೊಲೆ' ಎಂದ ನಟ

ರಾಧಾಕೃಷ್ಣ ನಗರ ಉಪ ಚುನಾವಣೆಗೆ ಖ್ಯಾತ ತಮಿಳು ನಟ ವಿಶಾಲ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ....
ವಿಶಾಲ್
ವಿಶಾಲ್
ಚೆನ್ನೈ: ರಾಧಾಕೃಷ್ಣ ನಗರ ಉಪ ಚುನಾವಣೆಗೆ ಖ್ಯಾತ ತಮಿಳು ನಟ ವಿಶಾಲ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ಮಂಗಳವಾರ ತಿರಸ್ಕರಿಸಿದ್ದು, ಇದು 'ಪ್ರಜಾಪ್ರಭುತ್ವದ ಕೊಲೆ' ಎಂದು ನಟ ಬುಧವಾರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶಾಲ್ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ್ದ ಇಬ್ಬರು ಅನುಮೋದಕರು ಅಫಿಡವಿಟ್ ನಲ್ಲಿ ಸಹಿ ಮಾಡಿರಲಿಲ್ಲ. ಹೀಗಾಗಿ ನಟನ ನಾಮಪತ್ರವನ್ನು ತಿರಸ್ಕರಿಸಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಅಭ್ಯರ್ಥಿಗೆ 10 ಮಂದಿ ಅನುಮೋದಕರಾಗಿ ಪ್ರಸ್ತಾವನೆ ಸಲ್ಲಿಸಬೇಕು. ಆದರೆ ವಿಶಾಲ್ ಅವರ ವಿಚಾರದಲ್ಲಿ ಕೇವಲ 8 ಮಂದಿ ಪ್ರಸ್ತಾವನೆಗಳು ಮಾತ್ರ ಮಾನ್ಯವಾಗಿವೆ. ಇನ್ನು ಎರಡು ಪ್ರಸ್ತಾವನೆ ಅಮಾನ್ಯಗೊಂಡಿರುವುದಾಗಿ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.
ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿಶಾಲ್ ಅವರು ಚುನಾವಣಾ ಅಧಿಕಾರಿಗಳೊಂದಿಗೆ ಕೆಲ ಕಾಲ ತೀವ್ರ ವಾಗ್ವಾದ ನಡೆಸಿದರು. ಅಲ್ಲದೆ ತೊಂದಿರಪೇಟ್ ನಲ್ಲಿರುವ ಚುನಾವಣಾ ಕಚೇರಿ ಮುಂದೆ ತಮ್ಮ ಬೆಂಬಲಿಗರೊಂದಿಗೆ ಧರಣಿ ಸಹ ನಡೆಸಿದರು.
ನಟ ಹಾಗೂ ನಾಡಿಗರ್ ಸಂಗಮ್ ಪ್ರಧಾನ ಕಾರ್ಯದರ್ಶಿಯಾಗಿರುವ ವಿಶಾಲ್ ಅವರು ಕಳೆದ ಶನಿವಾರ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದರು. ಅಲ್ಲದೆ ಸೋಮವಾರ ಆರ್ ಕೆ ನಗರ ಉಪ ಚುನಾವಣೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ನಿಧನದಿಂದ ತೆರವಾದ ಆರ್ ಕೆ ನಗರಕ್ಕೆ ಈಗ ಎರಡನೇ ಬಾರಿ ಉಪ ಚುನಾವಣೆ ನಿಗದಿಯಾಗಿದೆ. ಈ ಹಿಂದೆ ಮತದಾರರಿಗೆ ಭಾರಿ ಪ್ರಮಾಣದಲ್ಲಿ ಹಣ ಹಂಚಲಾಗಿದೆ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಉಪ ಚುನಾವಣೆಯನ್ನೇ ರದ್ದುಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com