ಹಿಮಾಚಲದಲ್ಲೂ ಅರಳಿತು ಕಮಲ, ಮುಂದಿನ ಮುಖ್ಯಮಂತ್ರಿಯತ್ತ ಎಲ್ಲರ ಚಿತ್ತ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೋಡಿ ಹಿಮಾಚಲ ಪ್ರದೇಶದಲ್ಲೂ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದು,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೋಡಿ ಹಿಮಾಚಲ ಪ್ರದೇಶದಲ್ಲೂ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದು, ಇದರೊಂದಿಗೆ ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಹೊರಟಿರುವ ಕೇಸರಿ ಪಡೆಗೆ ಮತ್ತೊಂದು ಗೆಲುವು ದಕ್ಕಿದಂತಾಗಿದೆ.
ಕಳೆದ ನವೆಂಬರ್ 9ರಂದು ಹಿಮಾಚಲ ಪ್ರದೇಶ ವಿಧಾನಸಭೆ ನಡೆದ ಚುವಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಹಿಮಾಚಲದಲ್ಲಿ 68 ಸ್ಥಾನಗಳ ಪೈಕಿ ಬಿಜೆಪಿ 44ರಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಗೆ ಸ್ಪಷ್ಟ ಬಹುಮತ ಪಡೆದಿದೆ. ಹಿಮಾಚಲದಲ್ಲಿ ಅಧಿಕಾರಕ್ಕೇರಬೇಕಾದರೆ 35 ಸೀಟುಗಳ ಗೆಲುವು ಅಗತ್ಯವಿದೆ.
ಇನ್ನು ಆಡಳಿತ ಕಾಂಗ್ರೆಸ್ ಕೇವಲ 20 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮತ್ತೊಂದು ರಾಜ್ಯ 'ಕೈ; ತಪ್ಪಿದಂತಾಗಿದೆ.
ಈ ಮಧ್ಯೆ ಹಿಮಾಚಲದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಪ್ರೇಮ್ ಕುಮಾರ್ ಧುಮಾಲ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸತ್ಪಾಲ್ ಸಿಂಗ್ ಶೆಟ್ಟಿ ಇಬ್ಬರೂ ಸೋಲು ಅನುಭವಿಸಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಹುಟ್ಟಿಸಿದೆ. 
ಬಿಜೆಪಿ ಸಂಸದೀಯ ಮಂಡಳಿ ಸೋತರು ಪ್ರೇಮ್ ಕುಮಾರ್ ಧುಮಾಲ್ ಅವರನ್ನೇ ಮುಖ್ಯಮಂತ್ರಿ ಮಾಡಬಹುದು ಅಥವಾ ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಹಿಮಾಚಲ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ಮಾಹಿತಿ ನೀಡಲು ಬಿಜೆಪಿ ನಿರಾಕರಿಸಿದೆ.
ಸದ್ಯ ದೇಶದಲ್ಲಿ ನಾಲ್ಕು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್‌ ಆಡಳಿತ ಇದ್ದಂತಾಗಿದೆ. ಕರ್ನಾಟಕ, ಪಂಜಾಬ್‌, ಮೇಘಾಲಯ ಮತ್ತು ಮಿಜೋರಾಂನಲ್ಲಿ ಮಾತ್ರ ಕಾಂಗ್ರೆಸ್‌ ಆಡಳಿತವಿದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಾಂಗ್ರೆಸ್‌ ಆಡಳಿತವಿದೆ. ಹಿಮಾಚಲದ ಗೆಲುವಿನೊಂದಿಗೆ ಒಟ್ಟು 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com