ಹಗಲು ಹೊತ್ತು ಕಾಂಡೊಮ್ ಜಾಹಿರಾತು ಪ್ರಸಾರ ಮಾಡುವುದಿಲ್ಲವೇಕೆ?: ರಾಜಸ್ತಾನ ಹೈಕೋರ್ಟ್ ಪ್ರಶ್ನೆ

ದಿನವಿಡೀ ಕಾಂಡೊಮ್ ಜಾಹಿರಾತುಗಳನ್ನು ಪ್ರಸಾರ ಮಾಡದೆ ಕೇವಲ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಪುರ: ದಿನವಿಡೀ ಕಾಂಡೊಮ್ ಜಾಹಿರಾತುಗಳನ್ನು ಪ್ರಸಾರ ಮಾಡದೆ ಕೇವಲ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ಮಧ್ಯೆ ಪ್ರಸಾರ ಮಾಡುವುದು ಏಕೆಂದು ಪ್ರಶ್ನಿಸಿ ರಾಜಸ್ತಾನ ಹೈಕೋರ್ಟ್ ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.
ರಾತ್ರಿ 10 ಗಂಟೆಯ ಮೊದಲು ಮತ್ತು ಬೆಳಗ್ಗೆ 6 ಗಂಟೆಯ ನಂತರ ಕಾಂಡೊಮ್ ಜಾಹಿರಾತುಗಳನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧ ಹೇರಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಕಳೆದ 11ರಂದು ಸಲಹೆಯನ್ನು ಹೊರಡಿಸಿತ್ತು. ಮಕ್ಕಳು ಅಸಭ್ಯ ಮತ್ತು ಸೂಕ್ತವಲ್ಲದ ವಿಷಯವನ್ನು ಟಿವಿಯಲ್ಲಿ ನೋಡಬಾರದೆಂದು ತಡೆಯಲು ಈ ಆದೇಶವೆಂದು ಮಾಹಿತಿ ಸಚಿವಾಲಯ ತಿಳಿಸಿತ್ತು.
ಈ ಆದೇಶವನ್ನು ಸರ್ಕಾರೇತರ ಸಂಘಟನೆ ಗ್ಲೋಬಲ್ ಅಲಯನ್ಸ್ ಫಾರ್ ಹ್ಯೂಮನ್ ರೈಟ್ಸ್ ರಾಜಸ್ತಾನ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಸಂಘಟನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರದೀಪ್ ನಂದ್ರಜೊಗ್ ಮತ್ತು ಡಿ.ಸಿ.ಸೊಮಾನಿ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರ್ಕಾರ, ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿಗಳಿಗೆ ನೊಟೀಸ್ ಜಾರಿ ಮಾಡಿದೆ.
ಹಗಲು ಹೊತ್ತಿನಲ್ಲಿ ಕಾಂಡೊಮ್ ಜಾಹಿರಾತುಗಳನ್ನು ಏಕೆ ಪ್ರಸಾರ ಮಾಡಬಾರದೆಂದು ಇನ್ನು 8 ವಾರಗಳೊಳಗೆ ಉತ್ತರಿಸುವಂತೆ ಸೂಕ್ತ ಕಾರಣ ನೀಡಲು ಸಂಬಂಧಪಟ್ಟ ಇಲಾಖೆಗೆ ನ್ಯಾಯಾಲಯ ಆದೇಶ ನೀಡಿದೆ.
ಅರ್ಜಿದಾರರು ಅರ್ಜಿಯಲ್ಲಿ, ದೇಶದ ಜನಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಜನರಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆ ಅಗತ್ಯವಿದೆ. ಹಗಲು ಹೊತ್ತಿನಲ್ಲಿ ಪ್ರಸಾರ ಮಾಡದೆ ಕೇವಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯೊಳಗೆ ಜಾಹಿರಾತು ಪ್ರಸಾರವಾದರೆ ಅದು ನಿರ್ದಿಷ್ಟ ಜನರನ್ನು ತಲುಪುವುದಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಏಡ್ಸ್ ಕೇಸುಗಳು ಕೂಡ ಹೆಚ್ಚಾಗುತ್ತಿದ್ದು ಕಾಂಡೊಮ್ ಜಾಹಿರಾತುಗಳು ದಿನವಿಡೀ ಪ್ರಸಾರವಾದರೆ ಜನರಿಗೆ ಅರಿವು ಮೂಡಿ ರೋಗವನ್ನು ತಡೆಗಟ್ಟಬಹುದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com