
ನವದೆಹಲಿ: ಇಸ್ರೋ ಅಂಗಸಂಸ್ಥೆಯಾದ ಆಂಟ್ರಿಕ್ಸ್ ಮತ್ತು ದೇವಾಸ್ ಮಲ್ಟಿಮೀಡಿಯಾ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ಇಸ್ರೋ ಮಾಜಿ ಮುಖ್ಯಸ್ಥ ಜಿ ಮಾಧವನ್ ನಾಯರ್ ಅವರಿಗೆ ಶನಿವಾರ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಮಾಧವನ್ ನಾಯರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಸಂತೋಷ್ ಸ್ನೇಹಿ ಮಾನ್ ಅವರು, 50 ಸಾವಿರ ರುಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೆ ಮೊತ್ತದ ಇಬ್ಬರು ಸ್ಯೂರಿಟಿ ಮೇಲೆ ಇಸ್ರೋ ಮಾಜಿ ಮುಖ್ಯಸ್ಥನಿಗೆ ಜಾಮೀನು ನೀಡಿದ್ದಾರೆ.
ಮಾಧವನ್ ನಾಯರ್ ಅವರಿಗೆ ಜಾಮೀನು ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿಬಿಐ, ಒಂದು ವೇಳೆ ಜಾಮೀನು ನೀಡಿದ್ರೆ ದೇಶದಿಂದ ಪಲಾಯನ ಮಾಡುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣದ ಇಬ್ಬರು ಆರೋಪಿಗಳು ಅಮೆರಿಕದಲ್ಲಿ ನೆಲೆಸಿರುವುದರಿಂದ ಇದುವರೆಗೂ ಅವರಿಗೆ ಸಮನ್ಸ್ ಜಾರಿ ಮಾಡಲು ಸಾಧ್ಯವಾಗಿಲ್ಲ ಮತ್ತು ಸಮನ್ಸ್ ತಲುಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಿಬಿಐ ವಿಚಾರಣೆ ವೇಳೆ ಕೋರ್ಟ್ ಮಾಹಿತಿ ನೀಡಿದೆ.
ಇಸ್ರೋ'ದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ನಾಯರ್ ಅವರು ಅದರ ಅಂಗಸಂಸ್ಥೆ ಆಂಟ್ರಿಕ್ಸ್'ನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಬಹುಕೋಟಿ ವ್ಯಾಪಾರ ಒಪ್ಪಂದವನ್ನು ಲಾಭಕ್ಕೆ ಪಡೆದುಕೊಂಡು ಅಂತಿಮಗೊಳಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
ಇಸ್ರೋದ ವಾಣಿಜ್ಯ ಉಪಕರಣ ಸಂಸ್ಥೆ ಆಂಟ್ರಿಕ್ಸ್'ಗಾಗಿ ಖಾಸಗಿ ಮಲ್ಟಿಮೀಡಿಯಾ ಸಂಸ್ಥೆ ದೇವಾಸ್ ಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಅಕ್ರಮವಾಗಿ 578 ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ನಾಯರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
Advertisement