ಜೈರಾಮ್ ಠಾಕೂರ್
ದೇಶ
ಹಿಮಾಚಲ ಪ್ರದೇಶ: ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಆಯ್ಕೆ
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೈರಾಮ್ ಠಾಕೂರ್ ಹಿಮಾಚಲ ಪ್ರದೇಶದ ...
ಶಿಮ್ಲಾ: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೈರಾಮ್ ಠಾಕೂರ್ ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಶಿಮ್ಲಾದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಹಿಮಾಚಲ ಪ್ರದೇಶದ ಕೇಂದ್ರ ವೀಕ್ಷಕಿ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನರೇಂದ್ರ ಸಿಂಗ್ ತೊಮರ್ ಸಭೆಯಲ್ಲಿ ಭಾಗವಹಿಸಿದ್ದರು.
ಹಿಮಾಚಲ ಪ್ರದೇಶ ಶಾಸಕಾಂಗ ಪಕ್ಷದ ನಾಯಕರಾಗಿ ಜೈರಾಮ್ ಠಾಕೂರ್ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ದುಮಲ್ ಸೂಚಿಸಿದ್ದು ಪಕ್ಷದ ಸದಸ್ಯರೆಲ್ಲರೂ ಸ್ವಾಗತಿಸಿದರು ಎಂದು ನರೇಂದ್ರ ಸಿಂಗ್ ತೊಮರ್ ತಿಳಿಸಿದ್ದಾರೆ.
ನಾಳೆ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಾಳೆಯಲ್ಲದಿದ್ದರೆ ಡಿಸೆಂಬರ್ 27ರಂದು ಬುಧವಾರ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
28 ವರ್ಷಕ್ಕೆ ಶಾಸಕರಾಗಿದ್ದ ಜೈರಾಮ್ ಠಾಕೂರ್ ಪತ್ನಿ ಡಾ. ಸಾಧನಾ ಠಾಕೂರ್ ಓರ್ವ ಕನ್ನಡತಿ. ಮೂಲತ: ಶಿವಮೊಗ್ಗದವರಾದ ಸಾಧನಾ ಕುಟುಂಬವು ಜೈಪುರಕ್ಕೆ ವಲಸೆ ಹೋಗಿ ನೆಲೆಸಿತ್ತು. ಎಬಿವಿಪಿ ಕಾರ್ಯಕರ್ತೆಯಾಗಿದ್ದ ಸಾಧನಾ ಅವರನ್ನು ಜೈರಾಮ್ ಠಾಕೂರ್ ಮದುವೆಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ