ಸುಪ್ರೀಂ ಕೋರ್ಟ್ ಪ್ರಕಟಿಸಿದ್ದ ಅತ್ಯಂತ ಮಹತ್ವದ, ದೇಶಾದ್ಯಂತ ಅತಿ ಹೆಚ್ಚು ಚರ್ಚೆಗೊಳಗಾದ, ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ತೀರ್ಪೆಂದರೆ ಅದು ತ್ರಿವಳಿ ತಲಾಖ್ ತೀರ್ಪು. ಮುಸ್ಲಿಂ ಮಹಿಳೆಯರ ವಿರುದ್ಧ ಎಗ್ಗಿಲ್ಲದೇ ಪ್ರಯೋಗವಾಗುತ್ತಿದ್ದ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಬರುವ ತ್ರಿವಳಿ ತಲಾಖ್ ನ್ನು ಆ.22 ರಂದು ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿತ್ತು. ಸಾಂವಿಧಾನಿಕ ಪೀಠದ ಪಂಚ ಸದಸ್ಯರ ಪೈಕಿ ಇಬ್ಬರು ಸದಸ್ಯರು ತ್ರಿವಳಿ ತಲಾಖ್ ಗೆ ಅನುಮೋದನೆ ನೀಡಿದ್ದು, ಉಳಿದ ಮೂವರು ನ್ಯಾಯಾಧೀಶರು ಮುಸ್ಲಿಂ ವೈಯುಕ್ತಿಕ ಕಾನೂನಿಗೆ ಸಂವಿಧಾನ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಅದರಂತೆ ಬಹುಮತದ ಆಧಾರದ ಮೇಲೆ ತ್ರಿವಳಿ ತಲ್ಲಾಖ್ ಅನ್ನು 6 ತಿಂಗಳ ಕಾಲ ರದ್ದು ಮಾಡಿ, 6 ತಿಂಗಳೊಳಗೆ ಈ ಬಗ್ಗೆ ಸೂಕ್ತ ಕಾನಾನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು. ಸೂಚನೆಯಂತೆಯೇ ಇತ್ತೀಚೆಗಷ್ಟೇ ಸಂಸತ್ ನಲ್ಲಿ ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಮಂಡಿಸಿದೆ.