ಲೋಕಸಭೆಯಲ್ಲಿ ಐತಿಹಾಸಿಕ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ

ಬಹು ನಿರೀಕ್ಷಿತ ತ್ರಿವಳಿ ತಲಾಖ್ ಮಸೂದೆ ಕೊನೆಗೂ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ಇದೊಂದು ಐತಿಹಾಸಿಕ ಮಸೂದೆ ಎಂದು ಕೇಂದ್ರ ಸರ್ಕಾರ ಬಣ್ಣಿಸಿದೆ.
ಲಕನೌನಲ್ಲಿ ಮುಸ್ಲಿಂ ಮಹಿಳೆಯರ ಸಂಭ್ರಮ
ಲಕನೌನಲ್ಲಿ ಮುಸ್ಲಿಂ ಮಹಿಳೆಯರ ಸಂಭ್ರಮ
ನವದೆಹಲಿ: ಬಹು ನಿರೀಕ್ಷಿತ ತ್ರಿವಳಿ ತಲಾಖ್ ಮಸೂದೆ ಕೊನೆಗೂ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ಇದೊಂದು ಐತಿಹಾಸಿಕ ಮಸೂದೆ ಎಂದು ಕೇಂದ್ರ ಸರ್ಕಾರ ಬಣ್ಣಿಸಿದೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರ ಸಮಾನ ಹಕ್ಕು ಮತ್ತು ನ್ಯಾಯಕ್ಕಾಗಿ ಈ ಕಾನೂನು ಹೊರತು, ಅಲ್ಪ ಸಂಖ್ಯಾತ ಪ್ರಾರ್ಥನೆ, ಸಂಪ್ರದಾಯ ಮತ್ತು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು. 
ಈ ವೇಳೆ ಆರ್ ಜೆಡಿ, ಬಿಜೆಡಿ, ಐಎಡಿಎಂಕೆ ಹಾಗೂ ಆಲ್ ಇಂಡಿಯಾ ಮುಸ್ಲಿಮ್ ಲೀಗ್ ಮಸೂದೆ ವಿರೋಧ ವ್ಯಕ್ತಪಡಿಸಿ, ಅದಕ್ಕೆ ಕೆಲವು ತಿದ್ದುಪಡಿಗಳನ್ನು ತರಬೇಕು ಎಂದು ಒತ್ತಾಯಿಸಿದರು. ಆದರೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿಯದ ಕೇಂದ್ರ ಮಸೂದೆ ಕುರಿತು ಚರ್ಚೆಯ ಬಳಿಕ ಯಾವುದೇ ತಿದ್ದಪಡಿಗಳಿಲ್ಲದೆ ಅಂಗೀಕರಿಸಿದೆ.
ಈ ಹೊಸ ಕಾನೂನಿನ ಪ್ರಕಾರ ಎಸ್ ಎಂಎಸ್ ಮೂಲಕ, ಇ-ಮೇಲ್ ಮೂಲಕ, ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಅಥವಾ ವಾಟ್ಸ್ ಆಪ್ ಮೂಲಕ ಸೇರಿದಂತೆ ಯಾವುದೇ ರೀತಿಯಲ್ಲೂ ತ್ರಿವಳಿ ತಲಾಖ್ ನೀಡುವುದು ಕಾನೂನು ಬಾಹಿರವಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಪತಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಇನ್ನು ಈ ಬಹು ನಿರೀಕ್ಷಿತ ಮಸೂದೆಯನ್ನು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ನೇತೃತ್ವದ ಆಂತರಿಕ ಸಚಿವಾಲಯ ಸಿದ್ಧಪಡಿಸಿದ್ದು, ಮುಸ್ಲಿಮ್ ಮಹಿಳೆಯರಿಗೆ ವಿವಾಹ ಸುರಕ್ಷತೆಯನ್ನು ಒದಗಿಸುತ್ತದೆ. ಕಾಯ್ದೆಯ ಅನ್ವಯ  ಯಾವುದೇ ಮುಸ್ಲಿಂ ವ್ಯಕ್ತಿ ತನ್ನ ಪತ್ನಿಗೆ  ಮೌಖಿಕವಾಗಿಯಾಗಲೀ, ಬರವಣಿಗೆ ಮೂಲಕವಾಗಲೀ, ಅಥವಾ ಇ-ಮೇಲ್, ಸಾಮಾಜಿಕ ಜಾಲತಾಣ, ಎಸ್ ಎಂಎಸ್, ವಾಟ್ಸಪ್ ನಂತಹ ಯಾವುದೇ ರೀತಿಯ ವಿದ್ಯುನ್ಮಾನ ಮಾಧ್ಯಮಗಳ  ಮೂಲಕವಾಗಲಿ ತ್ರಿವಳಿ ತಲಾಖ್ ಘೋಷಣೆ ಮಾಡಿದರೆ ಮೂರು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವ ಅವಕಾಶ ಈ ಮಸೂದೆಗಿದೆ. ಅಂತೆಯೇ ಮಸೂದೆಯಲ್ಲಿರುವ ಅಂಶಗಳಂತೆ ಕೇವಲ ಜೈಲು ಶಿಕ್ಷೆ ಮಾತ್ರವಲ್ಲದೇ ತ್ರಿವಳಿ  ತಲಾಖ್ ನೀಡಿದ ಗಂಡನಿಗೆ ದಂಡ ವಿಧಿಸುವ ಅವಕಾಶ ಕೂಡ ಇದ್ದು, ಸಂಬಂಧ ನ್ಯಾಯಾಧಿಕಾರಿ ದಂಡದ ಪ್ರಮಾಣವನ್ನು ನಿರ್ಧರಿಸಬಹುದಾಗಿದೆ.
ಇನ್ನು ಇಂದು ಮಂಡನೆಯಾಗಿರುವ ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು. ನಂತರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು, ಅಲ್ಲಿಯೂ ಅನುಮೋದನೆ ದೊರೆತ ಬಳಿಕ ರಾಷ್ಟ್ರಪತಿಗಳ ಅಂಕಿತಕ್ಕೆ ರವಾನೆ  ಮಾಡಲಾಗುತ್ತದೆ. ರಾಷ್ಟ್ರಪತಿಗಳ ಅಂಕಿತ ದೊರೆಯುತ್ತಿದ್ದಂತೆಯೇ ಮಸೂದೆ ಕಾನೂನಾಗಿ ಜಾರಿಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com