2017: ಭಾರತದಲ್ಲಿ ಸಂಭವಿಸಿದ ಪ್ರಮುಖ ಪ್ರಕೃತಿ ವಿಕೋಪಗಳು, ದುರಂತಗಳು

2017ರ ವರ್ಷ ಭಾರತದ ಪಾಲಿಗೆ ಸಾಕಷ್ಟು ಉತ್ತಮ ವರ್ಷವಾಗಿತ್ತು ಎನ್ನುವುದದಲ್ಲಿ ಅನುಮಾನವಿಲ್ಲ
2017: ಭಾರತದಲ್ಲಿ ಸಂಭವಿಸಿದ ಪ್ರಮುಖ ಪ್ರಕೃತಿ ವಿಕೋಪಗಳು, ದುರಂತಗಳು
2017: ಭಾರತದಲ್ಲಿ ಸಂಭವಿಸಿದ ಪ್ರಮುಖ ಪ್ರಕೃತಿ ವಿಕೋಪಗಳು, ದುರಂತಗಳು
2017ರ ವರ್ಷ ಭಾರತದ ಪಾಲಿಗೆ ಸಾಕಷ್ಟು ಉತ್ತಮ ವರ್ಷವಾಗಿತ್ತು ಎನ್ನುವುದದಲ್ಲಿ ಅನುಮಾನವಿಲ್ಲ. ಆದರೆ ಅದೇ ವೇಳೆ ದೇಶಾದ್ಯಂತ ಸಂಭವಿಸಿದ ಅಪಘಾತಗಳು, ಪ್ರಕೃತಿ ವಿಕೋಪಗಳಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದರೆ ಇನ್ನೂ ಸಾಕಷ್ಟು ಜನ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. 2018ರ ಸ್ವಾಗತಕ್ಕೆ ತಯಾರಾಗಿರುವ ಈ ಸಮಯದಲ್ಲಿ ನಮ್ಮ ದೇಶದಲ್ಲಿ ಘಟಿಸಿದ ದೊಡ್ಡ ಪ್ರಮಾಣದ ಪ್ರಕೃತಿ ವಿಕೋಪಗಳು ಹಾಗೂ ಅಪಘಾತಗಳ ಬಗೆಗೆ ಕಿರು ಮಾಹಿತಿಯನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಪಾಟ್ನಾ ದೋಣಿ ದುರಂತ
ಜನವರಿ 14 ರಂದು, ಬಿಹಾರದ ಪಾಟ್ನಾದಲ್ಲಿ ಸುಮಾರು 40 ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಹೊಂದಿದ್ದ ದೋಣಿಯು ಗಂಗಾ ನದಿಯಲ್ಲಿ ಮುಳುಗಿ 25 ಜನರು ಸಾವನ್ನಪ್ಪಿದ್ದರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಹಾರ ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.
ಕುನೇರು ರೈಲು ದುರಂತ
ಜನವರಿ 21 ರಂದು ಆಂಧ್ರ ಪ್ರದೇಶದ ಕುನೇರು ಬಳಿ ಜಗದಲಪುರ-ಭುವನೇಶ್ವರ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ 41 ಜನ ಸಾವನ್ನಪ್ಪಿದ್ದು 68 ಮಂದಿ ಗಾಯಗೊಂಡಿದ್ದರು. ರೈಲಿನಲ್ಲಿ ಒಟ್ಟು 600 ಪ್ರಯಾಣಿಕರಿದ್ದು ಕುನೇರು ರೈಲು ನಿಲ್ದಾಣದ ಬಳಿ ಬಂದಾಗ ರೈಲಿನ ಇಂಜಿನ್, ಲಗ್ಗೇಜ್ ವ್ಯಾನ್, ಎರಡು ಜನರಲ್ ಬೋಗಿ, ಎರಡು ಸ್ಲೀಪರ್ ಬೋಗಿ, ಒಂದು ಎಸಿ ತ್ರಿ ಟಯರ್ ಕೋಚ್ ಮತ್ತು ಎರಡು ಎಸಿ ಟು ಟಯರ್ ಕೋಚ್ ಗಳು ಹಳಿ ತಪ್ಪಿದ್ದವು.     
ಕಾಶ್ಮೀರ ಹಿಮಪಾತ
ಜನವರಿ 25ರಂದು ಕಾಶ್ಮೀರದಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ 20 ಸೈನಿಕರುಸೇರಿ 24 ಮಂದಿ ಮೃತಪಟ್ಟಿದ್ದರು. ಶ್ರೀನಗರದಿಂದ 200 ಕಿ. ಮೀ ದೂರದ ಬಂಡಿಪೋರ ಗುರೆಝ್ ಕಣಿವೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಗುರಝ್ ಪರ್ವತ ಪ್ರದೇಶದ ಕಣಿವೆ ಮತ್ತು ಕಾಶ್ಮೀರದ ನಡುವೆ ಒಂದೇ ಒಂದು ರಸ್ತೆ ಇದ್ದು ಆ ರಸ್ತೆಯೂ ಹಿಮಾವೃತವಾಗಿತ್ತು.
ಪಾಕಿಸ್ತಾನದ ಗಡಿ ಪ್ರದೇಶವಾದ ಈ ಭಾಗದಲ್ಲಿ ಸದಾ ಕಾಲ ಭಾರತೀಯ ಸೇನೆ ನಿಗಾ ಇಡುತ್ತಿತ್ತು. ಪ್ರತಿದಿನವೂ ಪ್ಯಾಟ್ರೋಲ್ಗಳು ನಡೆಸಲಾಗುತ್ತಿತ್ತು.
ಭಾರೀ ಪ್ರವಾಹಕ್ಕೆ ಸಾಕ್ಷಿಯಾದ ದೇಶ
ಈ ವರ್ಷ ದೇಶದ ನಾನಾ ಭಾಗಗಳಲ್ಲಿ ನೆರೆ, ಭೀಕರ ಪ್ರವಾಹ ಪರಿಸ್ಥಿತಿಯುಂಟಾಗಿ ಅಪಾರ ಸಾವು ನೋವುಗಳು ಸಂಭವಿಸಿದ್ದವು. ಬಿಹಾರ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು, ಗುಕರಾತ್, ಮುಂಬೈ ಸೇರಿ ದೇಶದ ನಾನಾ ಭಾಗಗಳಲ್ಲಿ ಬೇರೆ ಬೇರೆ ಅವಧಿಗಳಲ್ಲಿ ಪ್ರವಾಹ ತಲೆದೋರಿತ್ತು.
ಜುಲೈ ತಿಂಗಳಿನಲ್ಲಿ ಬ್ರಹ್ಮಪುತ್ರ ನದಿುಕ್ಕಿ ಹರಿದ ಪರಿಣಾಮ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ಗಳಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಇದರ ಪರಿಣಾಂಅ ಕನಿಷ್ಟ 85 ಜನ ಸಾವನ್ನಪ್ಪಿದ್ದರು. ನಾಲ್ಕರಿಂದ ಐದು ಲಕ್ಷ ಮಂದಿ ಪ್ರವಾಹ ಪರಿಸ್ಥಿತಿಯಿಂದ ಕಂಗಾಲಾಗಿದ್ದು ಮನೆ ಮಾರುಗಳನ್ನು ಕಳೆದುಕೊಂಡಿದ್ದರು.
ಜೂನ್-ಜುಲೈ ತಿಂಗಳಿನಲ್ಲಿ ಗುಜರಾತ್ ಹಾಗೂ ರಾಜಾಸ್ಥಾನದಲ್ಲಿ ಸುರಿದ ಮಹಾಮಳೆಯಿಂದ ಪ್ರವಾಹ ತಲೆದೋರಿ ಗುಜರಾತ್ ನಲ್ಲಿ 224 ಹಾಗೆ ರಾಜಾಸ್ಥಾನದಲ್ಲಿ 16 ಮಂದಿ ಜೀವ ಕಳೆದುಕೊಂಡಿದ್ದರು.
ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ್ದು ಇಲ್ಲಿ ಸಹ ಲಕ್ಷಾಂತರ ಜನ ಸಂಕಶ್ಟಕ್ಕೆ ಸಿಲುಕಿದ್ದರು. ಈ ಪ್ರವಾಹ ಸಂದರ್ಭ ಬಂಗಾಳದಲ್ಲಿ 50, ಜಾರ್ಖಂಡ್ ನಲ್ಲಿ  8 ಜನ ಮೃತಪಟ್ಟಿದ್ದರು
ಆಗಸ್ಟ್ ತಿಂಗಳಿನಲ್ಲಿ ಬಿಹಾರ ರಾಜ್ಯದ ಉತ್ತರ ಭಾಗಗಳಲ್ಲಿ ತೋರಿದ್ದ ಭೀಕರ ಪ್ರವಾಹ ಪರಿಸ್ಥಿತಿಯಿಂದ ಒಂದು ಕೋಟಿಗೆ ಹೆಚ್ಚು ಜನ ನಿರಾಶ್ರಿತರಾಗಿದ್ದರು. ಉತ್ತರ ಬಿಹಾರದ 19 ಜಿಲ್ಲೆಗಳಲ್ಲಿ ನೆರೆ ಪ್ರಮಾಣ ವಿಪರೀತವಾಗಿದ್ದು ಬಿಹಾರ ಪ್ರವಾಹದಲ್ಲಿ ಒಟ್ಟು 514 ಜನ ಸಾವನ್ನಪ್ಪಿದ್ದರು.
ಆಗಸ್ಟ್ ಅಂತ್ಯದಲ್ಲಿ ಮುಂಬೈ ಮಹಾನಗರದಲ್ಲಿ ಮಹಾಮಳೆ ಸುರಿದು ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಆಗಸ್ಟ್ 29ಕ್ಕೆ ಮುಂಬೈ ನಗರಿ ಈ ಮಳೆಯ ಕಾರಣ ಅಕ್ಷರಶಃ ಸ್ಥಬ್ದವಾಗಿತ್ತು. ರಸ್ತೆ, ರೈಲು ಸಂಚಾರ ನಿಂತದ್ದಲ್ಲದೆ ನಗರದ ಕೆಲ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಸುರಿದ ಮಹಾಮಳೆ ಸುಮಾರು 20 ಜೀವಗಳನ್ನು ಬಲಿ ಪಡೆದಿತ್ತು. ಇನ್ನು ಈ ಮಳೆಯಿಂದ ನಗರದಾದ್ಯಂತ ರಸ್ತೆಗಳಲ್ಲಿ 25 ಸಾವಿರದಷ್ಟು ಗುಂಡಿಗಳು ಕಾಣಿಸಿಕೊಂಡಿದ್ದವು. ಮಳೆಯಿಂದ ಹಲವು ಬಡಾವಣೆಗಳು ಜಲಾವೃತವಾಗಿದ್ದು ನಗರಾಡಳಿತ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಾಯಿತು.
ಮುಂಬೈ ಕಾಲ್ತುಳಿತ 
ಮುಂಬೈ ನ ಎಲ್ಫಿನ್‍ಸ್ಟೋನ್ ರೈಲುನಿಲ್ದಾಣದ ಪಾದಚಾರಿ ಸಂಚಾರ ಸೇತುವೆಯಲ್ಲಿ ಸಪ್ಟೆಂಬರ್ 29 ರಂದು ಉಂಟಾದ ಕಾಲ್ತುಳಿತದಿಂದ ಒಟ್ಟು 22 ಜನ ಸತ್ತು 39 ಮಂದಿ ಗಾಯಗೊಂಡಿದ್ದರು.
ಮುಂಬೈನಲ್ಲಿ ಸುರಿದಿದ್ದ ಭಾರಿ ಮಳೆಯ ನಂತರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಬೆಳಗ್ಗೆ 10.30ರ ವೇಳೆ ಪರೇಲ್ ಮತ್ತು  ಎಲ್ಫಿನ್‍ಸ್ಟೋನ್ ರೋಡ್ ಸ್ಟೇಷನ್ ನಡುವೆಯಿರುವ ಪಾದಚಾರಿಗಳ ಸಂಚಾರ ಮಾರ್ಗ ಸೇತುವೆ ಮೇಲೆ ನೂಕು ನುಗ್ಗಲು ಉಂಟಾಗಿ ದುರಂತ ಸಂಭವಿಸಿತ್ತು. ಪಾದಚಾರಿ ಮಾರ್ಗ ಸಾಕಷ್ಟು ಹಳೆಯದಾಗಿದ್ದು ದುರ್ಬಲವಾಗಿತ್ತು. ಇದೇ ಕಾರಣಕ್ಕೆ ಈ ದುರ್ಘಟನೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ಗೋರಖ್ ಪುರ ಆಸ್ಪತ್ರೆಯಲ್ಲಿ ಮಕ್ಕಳ ಸಾವು
ಉತ್ತರ ಪ್ರದೇಶದ ಗೋರಖ್ ಪುರದಲ್ಲಿರುವ ಬಿಆರ್ ಡಿವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವಿರಾರು ಮಕ್ಕಳು ಮೃತಪಟ್ಟಿದ್ದು ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸೆ. 2ನೇ ದಿನಾಂಕದ ಮಾಹಿತಿಯಂತೆ ಆಸ್ಪತ್ರೆಗೆ ದಾಖಲಾಗಿದ್ದ ಒಟ್ಟು 1,317 ಮಕ್ಕಳು ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಆಗಸ್ಟ್ ತಿಂಗಳಿನಲ್ಲಿ ಇದೇ ಆಸ್ಪತ್ರೆಯಲ್ಲಿ 325 ಮಕ್ಕಳು ಸಾವನ್ನಪ್ಪಿದ್ದರೆಂದು ಮಾದ್ಯಮಗಳು ವರದಿ ಮಾಡಿದ್ದವು. ಈ ಸಾವಿಗೆ ಎನ್ಸೆಫಾಲಿಟಿಸ್ ಸಿಂಡ್ರೋಮ್ ಕಾರಣವೆಂದು ಹೇಳಲಾಗಿತ್ತು. ಆಗಸ್ಟ್ 29ರ ವರೆಗೆ 175 ಮಕ್ಕಳು ಈ ಖಾಯಿಲೆಯಿಂದಾಗಿ ಮೃತಪಾರಿದ್ದಾರೆ ಎಂದು ವರದಿಯಾಗಿತ್ತು.
ಉತ್ತರ ಪ್ರದೇಶದ ರೈಲು ದುರಂತಗಳು
ಉತ್ತರ ಪ್ರದೇಶದಲ್ಲಿ ಈ ವರ್ಷ ಅತಿ ಹೆಚ್ಚು ರೈಲು ಅವಘಡಗಳು ಸಂಭವಿಸಿದ್ದು ಇದರಲ್ಲಿ ಒಂದೇ ವಾರದ ಅಂತರದಲ್ಲಿ ಸಂಭವಿಸ್ದ ಎರಡು ಪ್ರತ್ಯೇಕ ಅಪಘಾತಗಳೂ ಸೇರಿದ್ದವು.
ಮಾರ್ಚ್ 30ಕ್ಕೆ ಉತ್ತರಪ್ರದೇಶದ ಕಲ್ಪಹಾರ್ ಸಮೀಪ ಮಹಾಕೌಶಾಲ್ ಎಕ್ಸ್ ಪ್ರೆಸ್ ನ ಎಂಟು ಬೋಗಿಗಳು ಹಳಿತಪ್ಪಿದ್ದು 52 ಜನ ಗಾಯಗೊಂಡಿದ್ದರು.
19 ಆಗಸ್ಟ್ 2017ರಂದು, ಉತ್ತರ ಪ್ರದೇಶದ ಮುಜಫರ್ನಗರ್ ಜಿಲ್ಲೆಯ ಖತೂಲಿಯ ಬಳಿ ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ] 23 ಜನರು ಮೃತಪಟ್ಟಿದ್ದರು. ದುರಂತದಲ್ಲಿ ಒಟ್ಟು 156 ಮಂದಿ ಗಾಯಗೊಂಡಿದ್ದರು.
ಆಗಸ್ಟ್ 23 ರಂದು ಕೈಫಿಯತ್ ಎಕ್ಸ್ ಪ್ರೆಸ್ ರೈಲು ಉತ್ತರಪ್ರದೇಶದ ಔರೈಯಾ ಜಿಲ್ಲೆಯ ಪಟಾ ಮತ್ತು ಅಚಲ್ಡಾ ರೈಲು ನಿಲ್ದಾಣಗಳ ನಡುವೆ ಹಳಿತಪ್ಪಿತು. ಈ ದುರ್ಘಟನೆಯಲ್ಲಿ ಕನಿಷ್ಟ 100 ಮಂದಿ ಗಾಯಗೊಂಡಿದ್ದರು.
ನ.24ರಂದು ಉತ್ತರಪ್ರದೇಶದ ಚಿತ್ರಕೂಟದಲ್ಲಿ ವಾಸ್ಕೋ ಡಾ ಗಾಮಾ-ಪಾಟ್ನಾ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೀಡಾಗಿತ್ತು. ಈ ರೈಲು ದುರಂತದಲ್ಲಿ ಮೂವರು ಮೃತಪಟ್ಟು ಒಂಭತ್ತು ಜನ ಗಾಯಗೊಂಡಿದ್ದರು
ರಾಷ್ಟ್ರೀಯ ಉಷ್ಣವಿದ್ಯುತ್‌‌ ನಿಗಮ (ಎನ್‌ಟಿಪಿಸಿ) ಯಲ್ಲಿ ಬಾಯ್ಲರ್ ಸ್ಪೋಟ
ಉತ್ತರ ಪ್ರದೇಶದ ರಾಯ್‌‌ಬರೇಲಿ ಜಿಲ್ಲೆಯ ರಾಷ್ಟ್ರೀಯ ಉಷ್ಣವಿದ್ಯುತ್‌‌ ನಿಗಮದ ಸ್ಥಾವರದಲ್ಲಿ ನ. 1ರಂದು ಬಾಯ್ಲರ್‌ ಸ್ಫೋಟ ಸಂಭವಿಸಿ 32 ಜನ ಸಾವಿಗೀಡಾಗಿದ್ದರು. ಒಟ್ಟು 6 ಘಟಕಗಳನ್ನು ಹೊಂದಿದ್ದ ಸ್ಥಾವರದಲ್ಲಿ  1,550 ಮೆಗಾವ್ಯಾಟ್‌‌ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಸುಮಾರು 870 ಕಾರ್ಮಿಕರು ಕಾರ್ಯನಿರ್ವಹಿಸುವ ಈ ಘಟಕದಲ್ಲಿ ಉತ್ಪಾದಿಸಲಾಗುವ ವಿದ್ಯುತ್ ನ್ನು 9 ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ.
ಓಖಿ ಚಂಡಮಾರುತ
ಡಿಸೆಂಬರ್ ಮೊದಲ ವಾರದಲ್ಲಿ ಓಖಿ ಚಂಡಮಾರುತ ದಕ್ಷಿಣ ಭಾರತ ಕರಾವಳಿಯನ್ನಪ್ಪಳಿಸಿತ್ತು. ಸುಮಾರು ಒಂದು ವಾರ ಕಾಲ ನಿರಂತರ ಮಳೆ, ಗಾಳಿಯ ಕಾರಣ ತಮಿಳುನಾಡು, ಕೇರಳ, ಪುದುಚೇರಿ, ಕರ್ನಾಟಕ ಹಾಗೂ ಲಕ್ಷದ್ವೀಪದ ಕರಾವಳಿ ತೀರಗಳು ಅಪಾರ ಹಾನಿಗೊಳಗಾದವು. ದಕ್ಷಿಣ ರಾಜ್ಯಗಳ ಸುಮಾರು 400 ಮೀನುಗಾರರು ನಾಪತ್ತೆಯಾಗಿದ್ದು ದೇಶದಲ್ಲಿ ಈ ವರ್ಷ ಉಂಟಾದ ಭೀಕರ ಪ್ರಕೃತಿ ವಿಕೋಪವೆಂದು ಇದನ್ನು ಅಂದಾಜಿಸಲಾಗಿದೆ.
-ರಾಘವೇಂದ್ರ ಅಡಿಗ ಎಚ್ಚೆನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com