
ನವದೆಹಲಿ: ರಾಜಕೀಯ ಪಕ್ಷಗಳು ಪ್ರತಿ ವರ್ಷ ಡಿಸೆಂಬರ್ ಒಳಗೆ ಆಡಿಟ್ ರಿಟರ್ನ್ ಫೈಲ್ ಮಾಡದಿದ್ದರೇ ತೆರಿಗೆ ವಿನಾಯಿತಿಯಿಂದ ವಂಚಿತವಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಹಣ ನೀಡುವವರ ವಿಳಾಸವನ್ನು ರಹಸ್ಯವಾಗಿ ಇಡಲಾಗುವುದು ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅದಿಯಾ ಹೇಳಿದ್ದಾರೆ.
ಹಣಕಾಸು ಮಸೂದೆಗೆ ತಿದ್ದುಪಡಿ ತರುವ ಮೂಲಕ ದೇಣಿಗೆ ನೀಡುವವರ ಹೆಸರು ಗೌಪ್ಯವಾಗಿಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ನಿನ್ನೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ವೇಳೆ ರಾಜಕೀಯ ಪಕ್ಷಗಳು 2 ಸಾವಿರ ರು ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ನಿಯಮ ದಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ದೇಣಿಗೆ ದಾರರು ನೀಡುವ ಹಣವನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿ ಪಡೆಯಬಹುದಾಗಿದೆ.
ಇಲ್ಲಿಯವರೆಗೆ ರಾಜಕೀಯ ಪಕ್ಷಗಳು 20 ಸಾವಿರ ರು ವರೆಗೂ ದೇಣಿಗೆ ನಗದು ಹಣವನ್ನು ಸ್ವೀಕರಿಸಬಹುದಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿದ್ದುಡಿ ನಿಯಮದ ಪ್ರಕಾರ ದೇಣಿಗೆ ನೀಡುವವರು ಚುನಾವಣಾ ಬಾಂಡ್ ಖರೀದಿಸಬಹುದಾಗಿದೆ. ದೇಣಿಗೆದಾರರು ಮಾನ್ಯತೆ ಪಡೆದ ಬ್ಯಾಂಕ್ ಗಳಲ್ಲಿ ಚುನಾವಣಾ ಬಾಂಡ್ ಖರೀದಿಸಲು ಚೆಕ್ ಅಥವಾ ಡಿಜಿಟಲ್ ಪೇಮೆಂಟ್ ಮೂಲಕ ಮಾಡಬಹುದಾಗಿದೆ.
ಸರ್ಕಾರ ನಿಗದಿ ಪಡಿಸಿರುವ ಸಮಯದೊಳಗೆ ರಾಜಕೀಯ ಪಕ್ಷಗಳು ಆಡಿಟ್ ರಿಟರ್ನ್ ಫೈಲ್ ಮಾಡಬೇಕು ಇಲ್ಲದಿದ್ದರೇ ತೆರಿಗೆ ವಿನಾಯಿತಿಯಿಂದ ವಂಚತರಾಗುತ್ತಾರೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
Advertisement