
ಪುಣೆ: ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯನ್ನು ಮೂರು ದಿನದೊಳಗೆ ನಿಷೇಧಿಸಬೇಕೆಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.ಬಿಜೆಪಿಯ ನಿಲುವನ್ನು ವಿರೋಧಿಸಿರುವ ಶಿವಸೇನೆ ಇದು ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ ಎಂದು ಕಿಡಿಕಾರಿದೆ.
ನಗರಪಾಲಿಕೆ ಚುನಾವಣೆ ಸಮೀಪಿಸುತ್ತಿರುವಂತೆ ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆ ಶಿವಸೇನೆ ಪರ ಪ್ರಚಾರ ಮಾಡುವ ರೀತಿಯಲ್ಲಿ ಲೇಖನಗಳನ್ನು ಪ್ರಕಟಿಸುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರೆ ಶ್ವೇತಾಶಾಲಿನಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಜೊತೆಗೆ ಫೆ.16 ರಿಂದ 21ರವರೆಗಿನ ಅವಧಿಯಲ್ಲಿ 10 ನಗರಪಾಲಿಕೆ, 25 ಜಿಲ್ಲಾ ಪರಿಷತ್‌ಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಪತ್ರಿಕೆಯನ್ನು ನಿಷೇಧಿಸಬೇಕೆಂದು ಮನವಿ ಮಾಡಿದೆ.
ರಾಜ್ಯದಲ್ಲಿ ಬಿಜೆಪಿ ತುರ್ತು ಪರಿಸ್ಥಿತಿಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ. ಸಾಮ್ನಾ ಪತ್ರಿಕೆ ಮುಚ್ಚಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಉದ್ಧವ್ ಪುಣೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಿಡಿಕಾರಿದ್ದಾರೆ.
ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಟೀಕಿಸಿತ್ತು. ಈಗ ಅದೇ ಬಿಜೆಪಿ ಪತ್ರಿಕೆ ವಿರುದ್ಧ ನಿಷೇಧ ಕೋರುತ್ತಿರುವುದು ಎಮರ್ಜೆನ್ಸಿ ಅಲ್ಲವೇ ಎಂದು ಉದ್ಧವ್ ಪ್ರಶ್ನಿಸಿದ್ದಾರೆ.
Advertisement