
ಹೈದರಾಬಾದ್: ರಾಜ್ಯ ಕಾಂಗ್ರೆಸ್ ನಾಯಕರು ಕೆಲಸಕ್ಕೆ ಬಾರದವರು, ಡಕಾಯಿತರು ಹಾಗೂ ಗುಲಾಮರು ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸಾರ್ವಜನಿಕರ ಹಣವನ್ನು ಪೋಲು ಮಾಡಿ ತಮ್ಮ ಧಾರ್ಮಿಕ ಹರಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದು, ಅದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ಕಾಂಗ್ರೆಸ್ ಘೋಷಿಸಿದ ನಂತರ ತೆಲಂಗಾಣ ಕಾಂಗ್ರೆಸ್ ನಾಯಕರ ವಿರುದ್ಧ ಕೆಸಿಆರ್ ಖಂಡಿಸಿದ್ದಾರೆ.
ತಿರುಪತಿಗೆ 5 ಕೋಟಿ ರು. ಚಿನ್ನಾಭರಣ ದಾನ ನೀಡಿದ ಕೆಸಿಆರ್ ಶುಕ್ರವಾರ ಶಿವರಾತ್ರಿಯಂದು ಮದುಬಾಬದ್ ಜಿಲ್ಲೆಯಲ್ಲಿರುವ ಕರುವಿ ವೀರಭದ್ರಸ್ವಾಮಿಗೆ ಚಿನ್ನದ ಮೀಸೆ ಸಮರ್ಪಿಸಿದರು. ಇದನ್ನೆಲ್ಲಾ ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಕಾಂಗ್ರೆಸ್ ಹೇಳಿದ ಬೆನ್ನಲ್ಲೆ ಕೆಸಿಆರ್ ವಾಗ್ದಾಳಿ ನಡೆಸಿದ್ದಾರೆ.
ನನ್ನನ್ನು ಟೀಕಿಸುತ್ತಿರುವುದು ದುರಾದೃಷ್ಟಕರ, ತೆಲಂಗಾಣ ಹೋರಾಟದ ಸಮಯದಲ್ಲಿ ನಾನು ಮಾಡಿದ್ದ ಪ್ರತಿಜ್ಞೆಗಳನ್ನು ನೆರವೇರಿಸುತ್ತಿದ್ದೇನೆ, ಇದನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಮುಂಚೆ ವಿಪಕ್ಷಗಳು ಎರಡು ಬಾರಿ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ದೇವರಿಗೆ ನಾನು ಹರಕೆ ತೀರಿಸುತ್ತಿರುವುದಕ್ಕೆ ಕೆಲವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಈ ಹಿಂದೆ ನನ್ನ ವಯಕ್ತಿಕ ಹಣದಲ್ಲಿ ನಾನು ಇಲ್ಲಿ ಯಾಗ ನಡೆಸಿದಾಗಲೂ ಸಿಪಿಐ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ್ ರೆಡ್ಡಿ ಅದನ್ನು ಟೀಕಿಸಿದ್ದರು ಎಂದು ಕೆಸಿಆರ್ ರಾವ್ ಹೇಳಿದ್ದಾರೆ.
Advertisement