ಗುವಾಹಟಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮೇಘಾಲಯದ ಪಕ್ಷೇತರ ಶಾಸಕ ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್ ಅವರನ್ನು ಕೋರ್ಟ್ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಶಾಸಕನನ್ನು ಇಂದು ಪೊಲೀಸರು ಗುವಾಹಟಿಯ ಗೊರ್'ಚುಕ್ ಪ್ರದೇಶದಲ್ಲಿ ಬಂಧಿಸಿ, ಬಳಿಕ ಶಿಲಾಂಗ್ ನ ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
14 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಸಕ ಜೂಲಿಯಸ್ ಅವರು ಅತ್ಯಾಚಾರ ಮಾಡಿದ್ದಾರೆಂದು ಬಾಲಕಿಯ ಕುಟುಂದವರು ಡಿ.16 ರಂದು ದೂರು ನೀಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್ ಅವರು ನಾಪತ್ತೆಯಾಗಿದ್ದರು.
ನಂತರ ದೋರ್ಫಾಂಗ್ ಅವರ ಬಂಧನಕ್ಕೆ ಮೇಘಾಲಯ ಪೊಲೀಸರು ಲುಕ್'ಔಟ್ ನೊಟೀಸ್ ಜಾರಿ ಮಾಡಿತ್ತು. ಶಾಸಕ ಗುವಾಹಟಿಯಲ್ಲಿ ತಲೆಮರೆಸಿಕೊಂಡಿರುವುದಾಗಿ ಮಾಹಿತಿ ತಿಳಿಯುತ್ತಿದ್ದಂತೆ ಮೇಘಾಲಯ ಪೊಲೀಸರು ಅಸ್ಸಾಂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಅಸ್ಸಾಂ ಹಾಗೂ ಮೇಘಾಲಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಶಾಸಕ ದೋರ್ಫಾಂಗ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.