ಶ್ರೀನಗರ: ಕಾಶ್ಮೀರದ ಕಲ್ಲು ತೂರಾಟಕ್ಕೆ ನೋಟ್ ನಿಷೇಧ ಕಡಿವಾಣ ಹಾಕಿದೆ ಎಂಬ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆಯನ್ನು ತಳ್ಳಿಹಾಕಿರುವ ಜಮ್ಮು ಮತ್ತು ಕಾಶ್ಮೀರ ಪಿಡಿಪಿ-ಬಿಜೆಪಿ ಸರ್ಕಾರ, ಕಣಿವೆ ರಾಜ್ಯದ ಹಿಂಸಾಚಾರದ ಮೇಲೆ ನೋಟ್ ನಿಷೇಧ ಯಾವುದೇ ಪರಿಣಾಮ ಬೀರಿಲ್ಲ ಎಂದು ಸೋಮವಾರ ಹೇಳಿದೆ.
ನೋಟ್ ನಿಷೇಧದಿಂದಾಗಿ ರಾಜ್ಯದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ ಎಂಬುದಕ್ಕೆ ಸಂಬಂಧಿಸಿದಂತೆ ಇದುವರೆಗೂ ರಾಜ್ಯ ಸರ್ಕಾರಕ್ಕೆ ಯಾವುದೇ ವರದಿ ಬಂದಿಲ್ಲ ಎಂದು ಗೃಹ ಖಾತೆಯನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಇಂದು ವಿಧಾಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಕಾಶ್ಮೀರ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸತ್ ಪೌಲ್ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹಿಂಸಾಚಾರ ಹೆಚ್ಚಿಸಲು ನಕಲಿ ನೋಟ್ ಬಳಸಿರುವ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ನೋಟ್ ನಿಷೇಧ ಹಿಂಸಾಚಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿದರು.
ಕಣಿವೆ ರಾಜ್ಯದ ಹಿಂಸಾಚಾರದ ಮೇಲೆ ನೋಟ್ ನಿಷೇಧ ಯಾವ ರೀತಿ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಬಿಜೆಪಿ ಶಾಸಕ ಮಾಹಿತಿ ಕೇಳಿದ್ದರು.