ಮುಂಬೈ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಶಿವಾಜಿ ಹಾಗೂ ಶಿವಸೇನೆ ಸ್ಥಾಪಕರಾದ ಬಾಳ್ ಠಾಕ್ರೆ ವಿರುದ್ಧ ನಿಂದನಾತ್ಮಕ ಪೋಸ್ಟ್ ನ್ನು ಅಪ್ ಡೇಟ್ ಮಾಡಿದ್ದಕ್ಕೆ ಹಿಂದೂ ರಾಷ್ಟ್ರ ಸೇನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾದ ವ್ಯಕ್ತಿಗಳು ಮೋಹ್ಸಿನ್ ಶೇಖ್ ನ್ನು ಹತ್ಯೆ ಮಾಡಿದ್ದರು. 2014 ರ ಜೂನ್ ನಲ್ಲಿ ನಡೆದಿದ್ದ ಈ ಕೊಲೆಗೆ ಧಾರ್ಮಿಕ ನಿಂದನೆಯೇ ಪ್ರಚೋದನೆಯಾಗಿದೆ ಎಂದಿರುವ ಮುಂಬೈ ನ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಧಾರ್ಮಿಕ ನಿಂದನೆಯಿಂದ ಪ್ರಚೋದನೆಗೊಂಡಿದ್ದು, ಮೋಹ್ಸಿನ್ ಶೇಖ್ ನ್ನು ಹತ್ಯೆ ಮಾಡಲಾಗಿದೆ ಎಂದು ನ್ಯಾ. ಮೃದುಲಾ ಭಾಟ್ಕರ್ ಅಭಿಪ್ರಾಯಪಟ್ಟಿದ್ದು, ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಬಿಜಯ್ ರಾಜೇಂದ್ರ ಗಂಭಿರೆ, ರಂಜಿತ್ ಶಂಕರ್ ಯಾದವ್ ಹಾಗೂ ಅಜಯ್ ದಿಲೀಪ್ ಗೆ ಜಾಮೀನು ಮಂಜೂರು ಮಾಡಿದ್ದಾರೆ.
ಮೋಹ್ಸೀನ್ ಶೇಖ್ ಪ್ರಾರ್ಥನೆ ಮುಗಿಸಿ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ ಇಬ್ಬರ ಮೇಲೂ ದಾಳಿ ನಡೆಸಲಾಗಿತ್ತು. ದಾಳಿಯಿಂದ ಮೋಹ್ಸೀನ್ ಶೇಖ್ ನ ಸ್ನೇಹಿತ ತಪ್ಪಿಸಿಕೊಂಡಿದ್ದ. ಆದರೆ ಮೋಹ್ಸೀನ್ ಹತ್ಯೆಗೀಡಾಗಿದ್ದ. ಈ ಪ್ರಕರಣದ ಸಂಬಂಧ 21 ಜನರನ್ನು ಬಂಧಿಸಲಾಗಿತ್ತು.
ಹತ್ಯೆಯಾಗಿರುವ ವ್ಯಕ್ತಿಯ ತಪ್ಪೆಂದರೆ ಆತ ಅನ್ಯ ಧರ್ಮಕ್ಕೆ ಸೇರಿದ ವ್ಯಕ್ತಿ ಎಂಬುದು, ಈ ಅಂಶವನ್ನು ನಾನು ಅರೋಪಿಯ ಪರವಾಗಿ ಪರಿಗಣಿಸಲಾಗುತ್ತಿದೆ. ಅಷ್ಟೇ ಅಲ್ಲದೇ, ಆರೋಪಿಗಳು ಈ ಹಿಂದೆ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲದೇ ಇರುವುದು ಕೊಲೆ ಮಾಡಲು ಧಾರ್ಮಿಕ ನಿಂದನೆಯೇ ಪ್ರಚೋದನೆಯಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಮೋಹ್ಸೀನ್ ಶೇಖ್ ನೊಂದಿಗೆ ಆರೋಪಿಗಳು ವೈಯಕ್ತಿಕ ದ್ವೇಷ ಹೊಂದಿರಲಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮೋಹ್ಸೀನ್ ಕುಟುಂಬ ನಿರ್ಧರಿಸಿದೆ. ಕೋರ್ಟ್ ನ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋಹ್ಸೀನ್ ಶೇಖ್ ನ ತಂದೆ "ಹಾಗಾದರೆ ಪ್ರಚೋದನಕಾರಿ ಭಾಷಣವೂ ಮತ್ತೊಂದು ಧರ್ಮದ ತಪ್ಪು ಮಾಡದ ವ್ಯಕ್ತಿಯನ್ನು ಹತ್ಯೆ ಮಾಡಲು ಅನುಮತಿ ನೀಡುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.