
ಲೂಧಿಯಾನ: 9 ವರ್ಷದ ಹುಡುಗನನ್ನು ಕೊಂದು, ದೇಹವನ್ನು ಆರು ಭಾಗ ಮಾಡಿ, ಮಾಂಸ ತಿಂದು, ರಕ್ತ ಕುಡಿದ 16 ವರ್ಷದ ಬಾಲಕನನ್ನು ಲುಧಿಯಾನ ಪೊಲೀಸರು ಬಂಧಿಸಿದ್ದಾರೆ.
9 ವರ್ಷದ ದೀಪುಕುಮಾರ್ ಸೋಮವಾರ ನಾಪತ್ತೆಯಾಗಿದ್ದ. ಮರುದಿನ ಬೆಳಗ್ಗೆ ಲೂಧಿಯಾನದ ದುರ್ಗಿ ಪ್ರದೇಶದ ಖಾಲಿ ಜಾಗದಲ್ಲಿ ರುಂಡವಿಲ್ಲದ ದೇಹ ಪತ್ತೆಯಾಗಿತ್ತು.
ಆರೋಪಿ ಮತ್ತು ಮೃತ ಬಾಲಕ ಇಬ್ಬರು ವಲಸೆ ಕಾರ್ಮಿಕರ ಮಕ್ಕಳಾಗಿದ್ದು, ಇಬ್ಬರು ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. 8ನೇ ತರಗತಿಯ ವಿದ್ಯಾರ್ಥಿಯಾದ ಆರೋಪಿ ಕೊಲೆ ಮಾಡಿದ ನಂತರ ಮನೆಗೆ ಬಂದು ಎಂದಿನಂತೆ ವರ್ತಿಸಿದ್ದ. ತನ್ನ ಪೋಷಕರಿಗೆ ಅಡುಗೆ ಮಾಡಿ ಬಡಿಸಿ ನಂತರ ಚಂಡಿಘಡದಲ್ಲಿರುವ ತನ್ನ ಹಿರಿಯ ಅಣ್ಣನ ಮನೆಗೆ ತೆರಳಿದ್ದ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮೃತ ದೀಪು ಯುವಕನೊಬ್ಬನ ಜೊತೆ ಹೊಗುತ್ತಿರುವುದು ತಿಳಿದು ಬಂದಿದೆ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದೀಪವನ್ನು ಕೊಂದಿದ್ದಾಗಿ ಹಾಗೂ ಮಾಂಸವನ್ನು ತಿಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಇದೊಂದು ನರಭಕ್ಷಕ ಪ್ರಕರಣವಾಗಿದ್ದು, ಆರೋಪಿ ಬಾಲಕ ಮೊದಲು ಹಸಿ ಕೋಳಿ ಮಾಂಸ ತಿನ್ನುತ್ತಿದ್ದ, ಕೆಲವೊಮ್ಮೆ ತನ್ನ ಬೆರಳಗಳನ್ನೇ ತಿನ್ನುತ್ತಿದ್ದುದ್ದಾಗಿ ತಿಳಿಸಿದ್ದಾನೆ ಎಂದು ಡಿಸಿಪಿ ಭೂಪಿಂದರ್ ಸಿಂಗ್ ಹೇಳಿದ್ದಾರೆ.
ಆರೋಪಿ ಬಾಲಕನನ್ನು ಪೊಲೀಸರು ವೈದ್ಯಕೀಯ ಹಾಗೂ ಮಾನಸಿಕ ಪರೀಕ್ಷೆಗೆ ಒಳಪಡಿಸಿದ್ದಾರೆ.
ಸೋಮವಾರ ಮಧ್ಯಾಹ್ನ 1.40ರ ಸುಮಾರಿಗೆ ಬಾಲಕ ದೀಪುವನ್ನು ಗಾಳಿಪಟದ ದಾರ ಕೊಡುವುದಾಗಿ ಹೇಳಿ ಕರೆದುಕೊಂಡಿದ್ದಾನೆ. ಈ ವೇಳೆ ದೀಪು ಪೋಷಕರು ಮನೆಯಲ್ಲಿರಲಿಲ್ಲ. ಆರೋಪಿ ದೀಪವನ್ನು ಮೊದಲಿಗೆ ಕತ್ತು ಹಿಸುಕಿ ಕೊಂದಿದ್ದಾನೆ.
ನಂತರ ಬಾತ್ ರೂಮ್ ನಲ್ಲಿ ಆತನ ಬಟ್ಟೆ ಕಳಚಿ ದೇಹವನ್ನು ತೋಟದಲ್ಲಿ ಕೆಲಸ ಮಾಡುವ ಹರಿತವಾದ ಆಯುಧದಿಂದ ಕತ್ತರಿಸಿದ್ದಾನೆ. ನಂತರ ಪ್ಲಾಸ್ಟಿಕ್ ಚೀಲದಲ್ಲಿ ತುಂಡರಿಸಿದ ದೇಹವನ್ನು ತುಂಬಿ ಸೈಕಲ್ ನಲ್ಲಿ ತೆಗೆದುಕೊಂಡು ಹೋಗಿ ಖಾಲಿ ಜಾಗದಲ್ಲಿ ಎಸೆದಿದ್ದಾನೆ. ತನ್ನ ಶಾಲೆಯ ಕ್ಯಾಂಪಸ್ ಆವರಣದಲ್ಲಿ ಮೃತ ಬಾಲಕನ ಹೃದಯ ಎಸೆದಿದ್ದಾನೆ.
ತನ್ನ ಶಾಲೆಯ ಶಿಕ್ಷಕರನ್ನು ದ್ವೇಷಿಸುತ್ತಿದ್ದ ಆರೋಪಿ ಬಾಲಕ ಶಾಲೆಗೆ ಕೆಟ್ಟ ಹೆಸರು ಬರಲಿ ಎಂಬ ಉದ್ದೇಶದಿಂದ ಅಲ್ಲಿ ದೀಪುವಿನ ಹೃದಯ ಬಿಸಾಡಿದ್ದಾಗಿ ತಿಳಿಸಿದ್ದಾನೆ. ಶಾಲೆಯ ಕ್ಯಾಂಪಸ್ ಆವರಣದ ನೀರಿನ ಟ್ಯಾಂಕರ್ ಕೆಳಗೆ ಬಿದ್ದಿದ್ದ ಹೃದಯವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
Advertisement