ಬ್ರೇನ್ ಟ್ಯುಮರ್ ನಿಂದ ಬಳಲುತ್ತಿರುವ ಮಹಿಳೆಗೆ 2020ಕ್ಕೆ ಸರ್ಜರಿ ಡೇಟ್ ನೀಡಿದ ಏಮ್ಸ್!

ತಕ್ಷಣ ಸರ್ಜರಿ ಅಗತ್ಯವಿರುವ, ಬ್ರೇನ್ ಟ್ಯುಮರ್ ನಿಂದ ಬಳಲುತ್ತಿರುವ 65 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಏಮ್ಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತಕ್ಷಣ ಸರ್ಜರಿ ಅಗತ್ಯವಿರುವ, ಬ್ರೇನ್ ಟ್ಯುಮರ್ ನಿಂದ ಬಳಲುತ್ತಿರುವ 65 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಏಮ್ಸ್ ಫೆಬ್ರವರಿ 20, 2020ಕ್ಕೆ ಸರ್ಜರಿ ದಿನಾಂಕ ನೀಡಿದೆ.
ಬೆಡ್ ಗಳ ಕೊರತೆ ಹಿನ್ನೆಲೆಯಲ್ಲಿ ಬಿಹಾರದ ಛಾಪ್ರ ಜಿಲ್ಲೆಯ ರಮಾರತಿ ದೇವಿ ಎಂಬುವವರಿಗೆ ಏಮ್ಸ್ 2020ಕ್ಕೆ ಸರ್ಜರಿ ದಿನಾಂಕ ನೀಡಿದ್ದು, ರೋಗಿ ಪರದಾಡುವಂತಾಗಿದೆ.
ಬ್ರೇನ್ ಟ್ಯುಮರ್ ನಿಂದ ಬಳಲುತ್ತಿರುವ ದೇವಿಗೆ ಪಾಟ್ನಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಏಮ್ಸ್ ನರಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ರೆಫೆರ್ ಮಾಡಿದ್ದು, ಏಮ್ಸ್ ವೈದ್ಯರು ಸರ್ಜರಿಯ ಅಗತ್ಯ ಇದೆ ಎಂದು ಹೇಳಿದ್ದಾರೆ. ಆದರೆ ಬೆಡ್ ಗಳ ಕೊರತೆ ಹಿನ್ನೆಲೆಯಲ್ಲಿ ಫೆಬ್ರವರಿ 20, 2020ಕ್ಕೆ ಸರ್ಜರಿ ದಿನಾಂಕ ನೀಡಿದ್ದಾರೆ ಎಂದು ಮಹಿಳೆಯ ಪುತ್ರ ಗುಲಾಬ್ ಥಾಕೂರ್ ಅವರು ಹೇಳಿದ್ದಾರೆ.
2020 ತುಂಬಾ ತಡವಾಯಿತು.... ಆ ವೇಳೆಗೆ ನನ್ನ ತಾಯಿ ಸಾಯಲೂಬಹುದು. ನಾನು ಒಬ್ಬ ಬಡ ರೈತ. ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಲು ನನ್ನ ಬಳಿ ಹಣ ಇಲ್ಲ ಎಂದು ಅಳಲು ತೊಡಿಕೊಂಡಿರುವ ಥಾಕೂರ್, ಆದಷ್ಟು ಬೇಗ ಸರ್ಜರಿ ದಿನಾಂಕ ಪಡೆಯಲು ಪರದಾಡುತ್ತಿದ್ದಾರೆ.
ನನ್ನ ತಾಯಿ ಭಾರಿ ತಲೆನೋವು, ಆಗಾಗ ಸ್ಮರಣೆ ನಷ್ಟ ಹಾಗೂ ದಿನದಿಂದ ದಿನಕ್ಕೆ ದುರ್ಬಲರಾಗುತ್ತಿದ್ದು, ತುಂಬಾ ನೋವು ಅನುಭವಿಸುತ್ತಿದ್ದಾರೆ. ಆದರೆ ಆಸ್ಪತ್ರೆಯವರು ಮಾತ್ರ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಶೀಘ್ರ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎಂದು ಥಾಕೂರ್ ಹೇಳಿದ್ದಾರೆ.
ರೋಗಿಗಳ ಸಂಖ್ಯೆ ನಮ್ಮ ವೈದ್ಯರ ನಿರ್ವಹಿಸುವ ಸಂಖ್ಯೆಗಿಂತ ತುಂಬಾ ಹೆಚ್ಚಾಗಿರುತ್ತದೆ. ಹೀಗಾಗಿ ನಾವು ರೋಗಿಯ ಗಂಭೀರತೆಯನ್ನು ಆಧರಿಸಿ ಚಿಕಿತ್ಸೆ ನೀಡುತ್ತೇವೆ. ಕೆಲವು ಸಂದರ್ಭದಲ್ಲಿ ಕಾಯುವ ಪಟ್ಟಿ ತುಂಬಾ ದೊಡ್ಡದಾಗಿರುತ್ತದೆ ಮತ್ತು ರೋಗಿಯ ತುರ್ತು ಅಗತ್ಯ ಪರಿಗಣಿಸಿ ಸರ್ಜರಿ ನಡೆಸಲಾಗುವುದು ಎಂದು ನರಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್.ಶರ್ಮಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com