ಮುಜಾಫರನಗರ್: ನಾನು ಮತ್ತೆ ಉತ್ತರ ಪ್ರದೇಶ ವಿಧಾಸಭೆಗೆ ಆಯ್ಕೆಯಾದರೆ ಕೈರಾನ, ದಿಯೋಬಂದ್ ಮತ್ತು ಮೊರ್ದಾಬಾದ್ ನಲ್ಲಿ ಕರ್ಫ್ಯೂ ಜಾರಿಗೊಳಿಸುವುದಾಗಿ ಬಿಜೆಪಿ ಶಾಸಕ ಸುರೇಶ್ ರಾಣಾ ಅವರು ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
2013ರ ಮುಜಾಫರನಗರ್ ಗಲಭೆ ಪ್ರಕರಣದ ಆರೋಪಿಯಾಗಿರುವ ರಾಣಾ, ಶ್ಯಾಮ್ಲಿ ಜಿಲ್ಲೆಯ ಥಾಣ ಭವನ್ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಶನಿವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಣಾ, ಒಂದು ವೇಳೆ ಚುನಾವಣೆಯಲ್ಲಿ ನಾನು ಮತ್ತೆ ಗೆದ್ದು ಬಂದರೆ ಕೈರಾನ, ದಿಯೋಬಂದ್ ಮತ್ತು ಮೊರ್ದಾಬಾದ್ ನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದಿದ್ದಾರೆ.
ರಾಣಾ ಅವರ ಈ ವಿವಾದಾತ್ಮಕ ಹೇಳಿಕೆಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇನ್ನು ಇಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಣಾ, ನಾನು ರಾಜ್ಯದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿರುವ ಗೂಂಡಾಗಳ ಬಗ್ಗೆ ಹೇಳಿದ್ದೇನೆ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಬೇಡಿ ಎಂದಿದ್ದಾರೆ.