ಯಾತ್ರಿಕರ ಮೇಲೆ ಉಗ್ರರ ದಾಳಿ: ಮುಸ್ಲಿಮರು, ಕಾಶ್ಮೀರಿಗಳು ತಲೆ ತಗ್ಗಿಸುವಂತಾಗಿದೆ- ಮೆಹಬೂಬಾ ಮುಫ್ತಿ
ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಉಗ್ರ ದಾಳಿಯನ್ನು ಖಂಡಿಸಿರುವ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ, ಯಾತ್ರಿಕರ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯಿಂದ...
ಶ್ರೀನಗರ: ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಉಗ್ರ ದಾಳಿಯನ್ನು ಖಂಡಿಸಿರುವ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ, ಯಾತ್ರಿಕರ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯಿಂದ ಮುಸ್ಲಿಮರು ಹಾಗೂ ಪ್ರತಿಯೊಬ್ಬ ಕಾಶ್ಮೀರಿಯೂ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ.
ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿರುವ ಮೆಹಬೂಬಾ ಮುಫ್ತಿ, ಈ ಘಟನೆಯಿಂದ ಪ್ರತಿಯೊಬ್ಬ ಕಾಶ್ಮೀರಿಯೂ ತಲೆ ತಗ್ಗಿಸುವಂತಾಗಿದೆ. ಎಲ್ಲಾ ಸಂಕಷ್ಟಗಳ ನಡುವೆಯೂ ಯಾತ್ರಾರ್ಥಿಗಳು ಪ್ರತಿ ವರ್ಷ ಅಮರನಾಥ ಯಾತ್ರೆಗೆ ಆಗಮಿಸುತ್ತಾರೆ. ಭಯೋತ್ಪಾದಕ ದಾಳಿ ನಡೆದಿರುವುದನ್ನು ಖಂಡಿಸಲು ಪದಗಳು ಸಿಗುತ್ತಿಲ್ಲ. ಇದು ಮುಸ್ಲಿಮರು ಹಾಗೂ ಪ್ರತಿಯೊಬ್ಬ ಕಾಶ್ಮೀರಿಯೂ ತಲೆ ತಗ್ಗಿಸುವಂತಹ ಘಟನೆಯಾಗಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಭಯೋತ್ಪಾದಕರ ವಿರುದ್ಧ ಸೇನಾ ಪಡೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.