ಸೋನಿಯಾ ಗಾಂಧಿ
ದೇಶ
ಬಿಹಾರ ಮಹಾ ಮೈತ್ರಿ ಉಳಿಸಲು ಲಾಲು, ನಿತೀಶ್ ಕುಮಾರ್ ರೊಂದಿಗೆ ಸೋನಿಯಾ ಮಾತುಕತೆ
ಬಿಹಾರದ ಆಡಳಿತರೂಢ ಜೆಡಿಯು, ಆರ್ ಜೆಡಿ, ಕಾಂಗ್ರೆಸ್ ಕೂಟ ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟು ಶಮನಕ್ಕಾಗಿ ಕಾಂಗ್ರೆಸ್....
ಪಾಟ್ನಾ: ಬಿಹಾರದ ಆಡಳಿತರೂಢ ಜೆಡಿಯು, ಆರ್ ಜೆಡಿ, ಕಾಂಗ್ರೆಸ್ ಕೂಟ ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟು ಶಮನಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಧ್ಯ ಪ್ರವೇಶಿಸಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಲಾಲು ಅವರ ಕಿರಿಯ ಪುತ್ರ, ಉಪ ಮುಖ್ಯಮಂತ್ರಿ ತೇಜಶ್ವಿ ಯಾದವ್ ಅವರು ರಾಜಿನಾಮೆ ನೀಡಬೇಕು ಎಂದು ಜೆಡಿಯು ಪಟ್ಟು ಹಿಡಿದಿದೆ. ಆದರೆ ತೇಜಶ್ವಿ ಯಾದವ್ ರಾಜಿನಾಮೆ ನೀಡುವುದಿಲ್ಲ ಎಂದು ಲಾಲು ಪ್ರಸಾದ್ ಯಾದವ್ ಅವರು ಸ್ಪಷ್ಟಪಡಿಸಿದ್ದಾರೆ.
ಜೆಡಿಯು ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಅವರು ನಿತೀಶ್ ಕುಮಾರ್ ಹಾಗೂ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಜೆಡಿಯು, ಆರ್ ಜೆಡಿ, ಕಾಂಗ್ರೆಸ್ ಮಹಾ ಮೈತ್ರಿ ಮುರಿಯಬಾರದು ಎಂದು ಹೇಳಿದ್ದಾರೆ. ಆದರೆ ಮಹಾ ಮೈತ್ರಿ ಉಳಿಸುವುದಕ್ಕಾಗಿ ನಿಮ್ಮ ಪುತ್ರನಿಗೆ ರಾಜಿನಾಮೆ ನೀಡುವಂತೆ ಸೂಚಿಸಿ ಎಂದು ಲಾಲುಗೆ ಸೋನಿಯಾ ಹೇಳಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಈ ಮಧ್ಯೆ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಬಿಹಾರ ಶಿಕ್ಷಣ ಸಚಿವ ಅಶೋಕ್ ಚೌಧರಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ, ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದ್ದಾರೆ. ಆದರೆ ಚರ್ಚೆಯ ವಿಷಯ ಇನ್ನೂ ಬಹಿರಂಗವಾಗಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ