ಗುವಾಹತಿ: ನಾಗಲ್ಯಾಂಡ್ ಮುಖ್ಯಮಂತ್ರಿ ಶರ್‌ಹೋಜೆಲಿ ಲೆಜಿಟ್ಸು ಅವರ ರಿಟ್ ಅರ್ಜಿಯನ್ನು ಗುವಾಹತಿ ಹೈಕೋರ್ಟ್ ನ ಕೊಹಿಮಾ ಪೀಠ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯಪಾಲ ಪಿ ಬಿ ಆಚಾರ್ಯ ಅವರು ತುರ್ತು ಅಧಿವೇಶನ ಕರೆಯುವ ಮೂಲಕ ವಿಶ್ವಾಸಮತಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ಬುಧವಾರ ಬೆಳಗ್ಗೆ 9.30ಕ್ಕೆ ತುರ್ತು ಅಧಿವೇಶನ ಕರೆದಿದ್ದು, ಮುಖ್ಯಮಂತ್ರಿ ಶರ್‌ಹೋಜೆಲಿ ಲೆಜಿಟ್ಸು ಬಹುಮತ ಸಾಬೀತುಪಡಿಸಬೇಕಾಗಿದೆ.
ಜುಲೈ 15ರೊಳಗೆ ಬಹುಮತ ಸಾಬೀತುಪಡಿಸುವಂತೆ ಪಿ.ಬಿ.ಆಚಾರ್ಯ ಅವರು ಲೆಜಿಟ್ಸು ಅವರಿಗೆ ಸೂಚಿಸಿದ್ದರು. ಆದರೆ ಸಿಎಂ ಲೆಜಿಟ್ಸು ನೇತೃತ್ವದ ರಾಜ್ಯ ಸಚಿವ ಸಂಪುಟ ರಾಜ್ಯಪಾಲರ ಸೂಚನೆಯನ್ನು ತಿರಸ್ಕರಿಸಿ, ಅದರ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಆಡಳಿತರೂಢ ನಾಗಾ ಪೀಪಲ್ಸ್ ಫ್ರಂಟ್(ಎನ್ ಪಿಎಫ್)ನ 47 ಶಾಸಕರ ಪೈಕಿ 34 ಶಾಸಕರು ತಮಗೆ ಬೆಂಬಲ ನೀಡಿರುವುದಾಗಿ ಮಾಜಿ ಮುಖ್ಯಮಂತ್ರಿ ಟಿ.ಆರ್.ಝೀಲಿಯಾಂಗ್ ಅವರು ರಾಜ್ಯಪಾಲರಿಗೆ ಪತ್ರ ನೀಡಿದ ಹಿನ್ನಲೆಯಲ್ಲಿ ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚಿಸಿದ್ದರು.
ಎನ್ ಪಿಎಫ್ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಮುಂದಾಗಿರುವ ಝೀಲಿಯಾಂಗ್ ಅವರು, ಎನ್ ಪಿಎಫ್ 36 ಹಾಗೂ 7 ಪಕ್ಷೇತರ ಶಾಸಕರು ಸೇರಿ ತಮಗೆ 43 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಸರ್ಕಾರ ರಚಿಸುವ ತಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಝೀಲಿಯಾಂಗ್ ಸ್ಪಷ್ಟಪಡಿಸಿದ್ದಾರೆ.