ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

ಐಸಿಐಜೆ, ಎಚ್ ಎಸ್ ಬಿಸಿ ಪ್ರಕರಣಗಳಲ್ಲಿ 19 ಸಾವಿರ ಕೋಟಿ ರು. ಕಪ್ಪು ಹಣ ಪತ್ತೆ: ಅರುಣ್ ಜೇಟ್ಲಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ವಿಜರ್ ಲ್ಯಾಂಡ್ ನಲ್ಲಿ ಎಚ್ ಎಸ್ ಬಿಸಿ ಸೇರಿದಂತೆ ಇತರೆ ಬ್ಯಾಂಕ್ ಖಾತೆಗಳಲ್ಲಿ 19 ಸಾವಿರ....
ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ವಿಜರ್ ಲ್ಯಾಂಡ್ ನಲ್ಲಿ ಎಚ್ ಎಸ್ ಬಿಸಿ ಸೇರಿದಂತೆ ಇತರೆ ಬ್ಯಾಂಕ್ ಖಾತೆಗಳಲ್ಲಿ 19 ಸಾವಿರ ಕೋಟಿ ರುಪಾಯಿ ಕಪ್ಪು ಹಣ ಪತ್ತೆ ಹಚ್ಚಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.
ಇಂದು ಲೋಕಸಭೆಗೆ ವಿದೇಶದಲ್ಲಿರುವ ಕಪ್ಪು ಹಣದ ಕುರಿತು ನಡೆಯುತ್ತಿರುವ ತನಿಖೆಯ ಬಗ್ಗೆ ಮಾಹಿತಿ ನೀಡಿದ ಜೇಟ್ಲಿ, ತೆರಿಗೆ ವಂಚಿಸಿ ಸುಮಾರು 700 ಭಾರತೀಯರು ವಿದೇಶಿ ಬ್ಯಾಂಕ್ ಗಳಲ್ಲಿ 11,010 ಕೋಟಿ ರುಪಾಯಿಗೂ ಹೆಚ್ಚು ಕಪ್ಪು ಹಣ ಹೊಂದಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದರು.
ಕಪ್ಪು ಹಣಕ್ಕೆ ಸಂಬಂಧಿಸಿದಂತೆ 72 ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, 31 ಪ್ರಕರಣಗಳನ್ನು ಕ್ರಿಮಿನಲ್ ಕೋರ್ಟ್ ಗಳಿಗೆ ಸಲ್ಲಿಸಲಾಗಿದೆ ಎಂದು ಜೇಟ್ಲಿ ಲೋಕಸಭೆಗೆ ತಿಳಿಸಿದರು.
ಪನಾಮ ಪೇಪರ್ಸ್ ಲೀಕ್ ಮಾಡಿದ ವ್ಯಕ್ತಿಗಳ ಹೆಸರು ಸೇರಿದಂತೆ ವಿದೇಶದಲ್ಲಿ ಭಾರತೀಯರು ಹೊಂದಿರುವ ಅಘೋಷಿತ ಆಸ್ತಿಯ ಕುರಿತು ತ್ವರಿತ ತನಿಖೆಗಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ಏಪ್ರಿಲ್ ನಲ್ಲಿ ಮಲ್ಟಿ ಏಜೆನ್ಸಿ ಗ್ರೂಪ್(ಎಂಎಜಿ)ಯನ್ನು ರಚಿಸಿದೆ ಎಂದರು. ಅಲ್ಲದೆ ಫ್ರಾನ್ಸ್ ಸರ್ಕಾರದಿಂದ ಸ್ವಿಜರ್ ಲ್ಯಾಂಡ್ ನ ಎಚ್ ಎಎಸ್ ಬಿಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ 628 ಭಾರತೀಯರ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವ್ಯವಸ್ಥಿತ ತನಿಖೆಯಿಂದಾಗಿ ಈ ವರ್ಷ ಮೇ 2017ರವರೆಗೆ ಸರ್ಕಾರಕ್ಕೆ ಅಘೋಷಿತ ಆದಾಯದಿಂದ 8,437 ಕೋಟಿ ರುಪಾಯಿ ತೆರಿಗೆ ಸಂಗ್ರಹವಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com