ನವದೆಹಲಿ: ಪ್ರಮುಖ ಯುದ್ಧ ಸಾಮಗ್ರಿಗಳ ಆಮದಿನಲ್ಲಿ ವಿಳಂಬವಾಗುತ್ತಿರುವುದರಿಂದ ಯುದ್ಧ ಸಿದ್ಧತೆ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ, ಯುದ್ಧ ಟ್ಯಾಂಕ್ ಗಳು ಮತ್ತು ಇತರ ಮಿಲಿಟರಿ ವ್ಯವಸ್ಥೆಗಳಿಗೆ ಪ್ರಮುಖ ಘಟಕಗಳು ಮತ್ತು ಬಿಡಿಭಾಗಗಳ ತ್ವರಿತ ದೇಸೀಯಗೊಳಿಸುವಿಕೆಗೆ ನಿರ್ಧರಿಸಿದೆ.
41 ಆರ್ಡನೆನ್ಸ್ ಫ್ಯಾಕ್ಟರಿಗಳ ರಕ್ಷಣಾ ಅಂಗವಾದ ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್, ಮುಂದಿನ ಮೂರು ವರ್ಷಗಳಲ್ಲಿ ಆಮದು ಮಾಡಿಕೊಳ್ಳುವ ಬಿಡಿಭಾಗಗಳು ಮತ್ತು ಘಟಕಗಳನ್ನು
ವರ್ಷಕ್ಕೆ ಶೇಕಡಾ 60ರಿಂದ ಶೇಕಡಾ 30 ಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುದ್ಧದ ಮುಂಚೂಣಿ ನೆಲೆಗಳಿಗೆ ಫಿರಂಗಿ ಮತ್ತು ಇತರ ಮಿಲಿಟರಿ ಪೂರೈಕೆಗಳನ್ನು ಪೂರೈಸಲು ಕಾರಣವಾಗಿರುವ ಮಾಸ್ಟರ್ ಜನರಲ್ ಆಫ್ ದಿ ಆರ್ಡಿನೆನ್ಸ್, ಭಾರತೀಯ ರಕ್ಷಣಾ ಸಂಸ್ಥೆಗಳ ಜೊತೆಗೆ ವ್ಯಾಪಕ ಮಾತುಕತೆ ನಡೆಸಲು ಆರಂಭಿಸಿದೆ.
ಮಾಸ್ಟರ್ ಜನರಲ್ ಆಫ್ ಆರ್ಡಿನೆನ್ಸ್(ಎಂಜಿಒ) ಮತ್ತು ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್(ಒಎಫ್ ಬಿ) ವರ್ಷಕ್ಕೆ 10,000 ಕೋಟಿ ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಸಂಗ್ರಹಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದು ಸೇನಾ ಪಡೆಯ ದೀರ್ಘಕಾಲದ ಬೇಡಿಕೆಯಾಗಿದೆ. ರಷ್ಯಾದಿಂದ ಪ್ರಮುಖ ಯುದ್ಧೋಪಕರಣಗಳು ಮತ್ತು ಬಿಡಿಭಾಗಗಳನ್ನು ಪೂರೈಸುವುದರಿಂದ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ರಷ್ಯಾದಿಂದ ಸಂಗ್ರಹಿಸಲಾದ ಮಿಲಿಟರಿ ವ್ಯವಸ್ಥೆಗಳ ನಿರ್ವಹಣೆಗೆ ಪರಿಣಾಮ ಬೀರುತ್ತದೆ. ರಷ್ಯಾ ದೇಶವು ಭಾರತಕ್ಕೆ ಪ್ರಮುಖ ಮಿಲಿಟರಿ ಉಪಕರಣಗಳನ್ನು ಪೂರೈಸುವ ದೇಶವಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸೇರಿಸಿ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸಣ್ಣ ಭಾಗಗಳನ್ನು ತಯಾರಿಸಲು ಸೇನೆ ಯೋಜನೆ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸುಮಾರು 80 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಜೊತೆ ಸಾಕಷ್ಟು ಮಾತುಕತೆಗಳನ್ನು ನಡೆಸಲಾಗಿದೆ.
ಮುಂದಿನ ಕೆಲವು ವಾರಗಳಲ್ಲಿ ಮಾರ್ಗಸೂಚಿಯನ್ನು ಅಂತಿಮಗೊಳಿಸುವ ಒಂದು ನೀತಿ ದಾಖಲೆಯ ನೀಲನಕ್ಷೆಯನ್ನು ಅಂತಿಮಗೊಳಿಸಲಾಗುತ್ತದೆ.