ನವದೆಹಲಿ: ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ಇಲಾಖೆಯ ವ್ಯಾಪಕ ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಸಮೀಕ್ಷೆಗಳಿಂದ ಸುಮಾರು 71,941 ಕೋಟಿ ರೂಪಾಯಿ ಕಾಳಧನ(ಬಹಿರಂಗಪಡಿಸದ ಆದಾಯಗಳನ್ನು) ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಕಳೆದ ವರ್ಷ ನವೆಂಬರ್ 9ರ ನೋಟು ಅಮಾನ್ಯತೆ ನಂತರ ಈ ವರ್ಷ ಜನವರಿ 10ರವರೆಗೆ ಒಟ್ಟು ಬಹಿರಂಗಪಡಿಸದ ಆದಾಯ 5,400 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗಿದ್ದು, ವಶಪಡಿಸಿಕೊಳ್ಳಲಾಗಿರುವ ಚಿನ್ನದ ಮೌಲ್ಯ 303.367 ಕೆಜಿಗಳಷ್ಟು ಎಂದು ಹಣಕಾಸು ಸಚಿವಾಲಯ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಹೇಳಿದೆ.
ಏಪ್ರಿಲ್ 2014ರಿಂದ ಈ ವರ್ಷ ಫೆಬ್ರವರಿ 28ರವರೆಗೆ ಮೂರು ವರ್ಷಗಳ ನೋಟು ಅಮಾನ್ಯತೆ ಸಮಯ ಸೇರಿದಂತೆ ಲೆಕ್ಕವಿಲ್ಲದ ಆದಾಯದ ವಿವರಗಳನ್ನು ಇಲಾಖೆ ನೀಡಿದೆ.
ಮೂರು ವರ್ಷಗಳ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆ 2,027ಕ್ಕೂ ಅಧಿಕ ಗುಂಪುಗಳ ಮೇಲೆ ಶೋಧ ಕಾರ್ಯ ನಡೆಸಿ 36,051 ಕೋಟಿ ರೂಪಾಯಿಗೂ ಅಧಿಕ ಬಹಿರಂಗಪಡಿಸದ ಆದಾಯಗಳ ವಿವರ ನೀಡಿದೆ. ಬಹಿರಂಗಪಡಿಸದ ಸಂಪತ್ತು 2,890 ಕೋಟಿ ರೂಪಾಯಿ ಹೆಚ್ಚುವರಿಯಾಗಿದೆ ಎಂದು ಹೇಳಿದೆ.
ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ 15,000ಕ್ಕೂ ಅಧಿಕ ಶೋಧ ಕಾರ್ಯ ನಡೆಸಿದ್ದು ಇದರಿಂದಾಗಿ 33,000 ಕೋಟಿ ರೂಪಾಯಿಗೂ ಅಧಿಕ ಬಹಿರಂಗಪಡಿಸದ ಆದಾಯ ಪತ್ತೆಯಾಗಿದೆ.
ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ನಂತರದ ಸಾಧನೆ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಕಳೆದ ವರ್ಷ ನವೆಂಬರ್ 9ರ ನಂತರ ಎರಡು ತಿಂಗಳುಗಳಲ್ಲಿ ಆದಾಯ ತೆರಿಗೆ ಇಲಾಖೆ ಗಮನಾರ್ಹವಾಗಿ ದೊಡ್ಡ ಸಂಖ್ಯೆಯಲ್ಲಿ ಜಾರಿ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದೆ.