ನವದೆಹಲಿ: ದೇಶದಲ್ಲಿ ಪ್ರತಿ ವರ್ಷ ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಈ ಅಪಘಾತಗಳಲ್ಲಿ ಪ್ರತಿ ವರ್ಷ 1.50 ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿರುವ ಆಘಾತಕಾರಿ ಮಾಹಿತಿಯನ್ನು ಗುರುವಾರ ಲೋಕಸಭೆಗೆ ತಿಳಿಸಲಾಗಿದೆ.
ರಸ್ತೆ ಅಪಘಾತಗಳ ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಶೇ.4ರಷ್ಟು ಹೆಚ್ಚಳವಾಗಿದೆ. ಅದೇ ವೇಳೆ ದೇಶದಲ್ಲಿನ ಮೋಟಾರು ವಾಹನ ಉದ್ದಿಮೆಯು ಶೇ.22ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಲೋಕಸಭೆಗೆ ತಿಳಿಸಿದ್ದಾರೆ.
ದೇಶದಲ್ಲಿ ಸುಮಾರು ಶೇ.30ರಷ್ಟು ಬೋಗಸ್ ಲೈಸನ್ಸ್‌ಗಳು ಚಾಲ್ತಿಯಲ್ಲಿವೆ ಎಂದು ಗಡ್ಕರಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ನಮ್ಮ ಸಚಿವಾಲಯ ಸೇತುವೆಗಳ ಸಮೀಕ್ಷೆ ನಡೆಸಿದ್ದು, ದೇಶದಲ್ಲಿ 1.62 ಲಕ್ಷ ಸೇತುವೆಗಳಿವೆ; ಇವುಗಳಲ್ಲಿ 1,26,233 ಮೋರಿಗಳು ಸೇರಿವೆ; 147 ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎಂದರು.