ಪ್ರಸಿದ್ಧ ವ್ಯಕ್ತಿ ಕಲಾಂ ಅವರು ಹುಟ್ಟಿದ ಪವಿತ್ರ ಭೂಮಿ ರಾಮೇಶ್ವರ: ನರೇಂದ್ರ ಮೋದಿ

ಭಾರತದ ಇತಿಹಾಸದಲ್ಲಿ ರಾಮೇಶ್ವರಕ್ಕೆ ಪ್ರಮುಖ ಸ್ಥಾನಮಾನವಿದ್ದು, ಈ ಪವಿತ್ರ ಭೂಮಿ ಭಾರತಕ್ಕೆ ಪ್ರಖ್ಯಾತ ವ್ಯಕ್ತಿಯಾದ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ರಾಮೇಶ್ವರ(ತಮಿಳುನಾಡು): ಭಾರತದ ಇತಿಹಾಸದಲ್ಲಿ ರಾಮೇಶ್ವರಕ್ಕೆ ಪ್ರಮುಖ ಸ್ಥಾನಮಾನವಿದ್ದು, ಈ ಪವಿತ್ರ ಭೂಮಿ ಭಾರತಕ್ಕೆ ಪ್ರಖ್ಯಾತ ವ್ಯಕ್ತಿಯಾದ ಡಾ.ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಎಂಬವರನ್ನು ನೀಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಇಲ್ಲಿ ಇಂದು ಬೆಳಗ್ಗೆ ಡಾ.ಅಬ್ದುಲ್ ಕಲಾಂ ಅವರ 2ನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಅವರ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿ, ಆಳವಾದ ಧಾರ್ಮಿಕ ಜ್ಞಾನವನ್ನು ಹೊಂದಿರುವ ರಾಮೇಶ್ವರಕ್ಕೆ ಭೇಟಿ ನೀಡಿರುವುದು ತಮ್ಮ ಸೌಭಾಗ್ಯ ಎಂದರು.
ರಾಮೇಶ್ವರಕ್ಕೆ ನಮ್ಮ ಇತಿಹಾಸದಲ್ಲಿ ಪ್ರಮುಖ ಸ್ಥಾನಮಾನವಿದೆ. ಡಾ.ಕಲಾಂ ಅವರು ಹುಟ್ಟಿದ ಈ ಊರಿನ ಜೊತೆ ಅವರಿಗೆ ಹತ್ತಿರದ ಬಾಂಧವ್ಯವಿತ್ತು. ಇಂತಹ ಪವಿತ್ರ ಭೂಮಿ ರಾಮೇಶ್ವರಕ್ಕೆ ಕಾಲಿಟ್ಟಿರುವುದು ಮಹಾನ್ ಗೌರವವವಾಗಿದೆ ಎಂದು ಹೇಳಿದರು.
ರಾಮೇಶ್ವರದ ಸರಳತೆ, ಆಳ ಮತ್ತು ಶಾಂತತೆಯನ್ನು ಡಾ.ಕಲಾಂ ಅವರು ಪ್ರತಿಬಿಂಬಿಸುತ್ತಿದ್ದರು ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಮೋದಿಯವರು ಡಾ.ಅಬ್ದುಲ್ ಕಲಾಂ ಸ್ಮಾರಕ ನಿರ್ಮಾಣದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಎದ್ದು ನಿಂತು ಚಪ್ಪಾಳೆ ನೀಡಿದರು. ಡಾ. ಕಲಾಂ ಅವರ ಜೀವನ ಮತ್ತು ಸಮಯವನ್ನು ಗಮನಾರ್ಹ ರೀತಿಯಲ್ಲಿ ಕಲಾಂ ಅವರ ಸ್ಮಾರಕ ತೋರಿಸುತ್ತದೆ ಎಂದರು. 
ಡಾ.ಕಲಾಂ ಅವರು ಭಾರತ ದೇಶದ ಅನೇಕ ಯುವಕರಿಗೆ ಸ್ಫೂರ್ತಿ ನೀಡಿದ್ದರು. ಇಂದಿನ ಯುವಕರು ಪ್ರಗತಿಯ ಎತ್ತರವನ್ನು ಅಳೆಯಲು ಬಯಸುತ್ತಾರೆ ಮತ್ತು ಉದ್ಯೋಗ ಸೃಷ್ಟಿಕರ್ತರಾಗುತ್ತಾರೆ. ಭಾರತ ದೇಶ ಬಂದರುಗಳು ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ರೂಪಾಂತರ ತರಬೇಕು. ಅದು ಭಾರತದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರನ್ನು ಸ್ಮರಿಸಿದ ಪ್ರಧಾನಿ, ಅವರೊಬ್ಬ ನಾಯಕಿ. ಅವರ ಆತ್ಮದ ಆಶೀರ್ವಾದ ನಮಗೆ ಯಾವತ್ತೂ ಸಿಗುತ್ತಿರಲಿ ಎಂದು ಬಯಸಿದರು.
ಇಂದು ಜಯಲಲಿತಾ ಅವರಿಲ್ಲದೆ ಖಾಲಿಯಾದಂತೆ ಅನಿಸುತ್ತಿದೆ. ಇಂದು ಅವರು ನಮ್ಮೆಲ್ಲರ ಮನಸ್ಸಿನಲ್ಲಿದ್ದಾರೆ. ಅವರೊಬ್ಬ ನಾಯಕಿಯಾಗಿದ್ದು ಯಾವತ್ತಿಗೂ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನದಲ್ಲಿ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯಿರುವುದು ಖುಷಿ ತಂದಿದೆ ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಕಲಾಂ ಸಂದೇಶ ವಾಹಿನಿ ಪ್ರದರ್ಶನಾ ಬಸ್ ಗೆ ಪ್ರಧಾನಿ ಚಾಲನೆ ನೀಡಿದರು. ಅದು ದೇಶಾದ್ಯಂತ ಸುತ್ತಿ ಅಕ್ಟೋಬರ್ 15ರಂದು ದೆಹಲಿಯ ರಾಷ್ಟ್ರಪತಿ ಭವನಕ್ಕೆ ತಲುಪಲಿದೆ. ಅಂದು ಕಲಾಂ ಅವರ ಜನ್ಮ  ವಾರ್ಷಿಕೋತ್ಸವವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com