ಭೋಪಾಲ್: ಉತ್ತರ ಪ್ರದೇಶ ಗಡಿ ಭಾಗದ ಛತ್ತರ್ ಪುರ್ ಜಿಲ್ಲೆಯ ಮರಳು ಮತ್ತು ಗ್ರಾನೈಟ್ ಮಾಫಿಯಾದಿಂದ ನನಗೆ ಜೀವ ಬೆದರಿಕೆ ಇದೆ ಎಂದು ಮಧ್ಯಪ್ರದೇಶ ಬಿಜೆಪಿ ಶಾಸಕರೊಬ್ಬರು ಸೋಮವಾರ ಹೇಳಿದ್ದಾರೆ.
ಈ ಸಂಬಂಧ ಮಧ್ಯಪ್ರದೇಶ ಗೃಹ ಸಚಿವರಿಗೆ ಹಾಗೂ ಛತ್ತರ್ ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿರುವ ಚಂಡ್ಲಾ ಬಿಜೆಪಿ ಶಾಸಕ ಆರ್ ಡಿ ಪ್ರಜಾಪತಿ ಅವರು, ಜುಲೈ 29ರಂದು ದುಷ್ಕರ್ಮಿಯೊಬ್ಬ ತನ್ನ ಮೊಬೈಲ್ ಗೆ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ.
ತಮಗೆ ಕರೆ ಮಾಡಿದ ವ್ಯಕ್ತಿ ಮರಳು ಮತ್ತು ಗ್ರಾನೈಟ್ ಮಾಫಿಯಾಗೆ ಸೇರಿದ ವ್ಯಕ್ತಿಯಾಗಿರುವ ಸಾಧ್ಯತೆ ಇದೆ ಎಂದು ಪ್ರಜಾಪತಿ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಶಾಸಕರ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ಖನ್ನಾ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಕಳೆದ ಜೂನ್ ನಲ್ಲಿ ಛತ್ತರ್ ಪುರ್ ಜಿಲ್ಲೆಯ ರಾಂಪಂತ್ ಮರಳು ಮಾಫಿಯಾದಿಂದ ಐಎಎಸ್ ಅಧಿಕಾರಿ ಸೋನಿಯಾ ಮೀನಾ ಅವರಿಗೆ ಬೆದರಿಕೆ ಕರೆಗಳು ಬಂದಿದ್ದರಿಂದ ದೊಡ್ಡ ಸುದ್ದಿಯಾಗಿತ್ತು. ಬಳಿಕ ಅವರನ್ನು ಉಮರಿಯಾ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಈ ಬೆಳವಣಿಗೆ ನಂತರ ಐಎಎಸ್ ಅಧಿಕಾರಿಗೆ ಭಾರಿ ಭದ್ರತೆ ಒದಗಿಸಲಾಗಿತ್ತು.
ಛತ್ತರ್ ಪುರ್ ಮೈನಿಂಗ್ ಮಾಫಿಯಾಗೆ ಸಂಬಂಧಿಸಿದಂತೆ ಆರ್ ಡಿ ಪ್ರಜಾಪತಿ ಅವರು 2016ರಲ್ಲಿ ತಮ್ಮ ಪಕ್ಷದ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದರು. ಅವರಿಗೆ ಪ್ರತಿಪಕ್ಷ ಕಾಂಗ್ರೆಸ್ ಸಹ ಬೆಂಬಲ ಸೂಚಿಸಿತ್ತು. ಇದರಿಂದ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕಿಡಾಗಿತ್ತು.