ನವದೆಹಲಿ: ಗುವಾಹಾಟಿಯಲ್ಲಿ ನಡೆದ ಉನ್ನತ ಮಟ್ಟದ ಸರಣಿ ಸಭೆಗಳಲ್ಲಿ ನೆರೆ ಪ್ರವಾಹ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳಿಗೆ 2,000 ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ.
ಪರಿಹಾರ, ಪುನರ್ವಸತಿ, ಮರು ನಿರ್ಮಾಣ ಮತ್ತು ಪ್ರವಾಹ ಪೀಡಿತ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ತಡೆಗಟ್ಟುವಿಕೆ ಕ್ರಮವಾಗಿ ಪ್ರಧಾನಿಯವರು ಈ ಪ್ಯಾಕೇಜ್ ನ್ನು ಘೋಷಿಸಿದ್ದಾರೆ.
ಇಂದು ದಿನವಿಡೀ ಪ್ರಧಾನ ಮಂತ್ರಿಯವರು ಪ್ರತ್ಯೇಕ ಸಭೆ ನಡೆಸಿ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.
ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಮಿಜೋರಂ ಮುಖ್ಯಮಂತ್ರಿ ಲಿಖಿತ ಟಿಪ್ಪಣಿಯೊಂದನ್ನು ಬರೆದು ಕಳುಹಿಸಿದ್ದರು.
ಈ ರಾಜ್ಯಗಳ ಮೂಲಭೂತ ಸೌಕರ್ಯವೊಂದಕ್ಕೇ 1200 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ದುರಸ್ತಿ, ನಿರ್ವಹಣೆ, ರಸ್ತೆ ಬಲವರ್ಧನೆ, ಹೆದ್ದಾರಿ, ಸೇತುವೆ ಮತ್ತು ಇತರ ಹಾನಿಗೀಡಾದವುಗಳನ್ನು ದುರಸ್ತಿ ಮಾಡಲು ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ.