ಇವಿಎಂ ಹ್ಯಾಕಿಂಗ್ ಚಾಲೆಂಜ್ ಗೆ ಎನ್ ಸಿಪಿ, ಸಿಪಿಐ(ಎಂ) ನಿಂದ ನೀರಸ ಪ್ರತಿಕ್ರಿಯೆ: ಚುನಾವಣಾ ಆಯೋಗ

ವಿದ್ಯುನ್ಮಾನ ಮತಯಂತ್ರಗಳ ಹ್ಯಾಕಿಂಗ್ ಸವಾಲುಗಳನ್ನು ಸ್ವೀಕರಿಸಿದ ಚುನಾವಣಾ ಆಯೋಗ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ  ನಡೆಸಿದ ವಿದ್ಯುನ್ಮಾನ ಮತಯಂತ್ರ ಹ್ಯಾಕಥಾನ್ ಸವಾಲಿನಲ್ಲಿ ಭಾಗವಹಿಸಿದ ಸಿಪಿಎಎಂ, ಸವಾಲಿನಲ್ಲಿ ಭಾಗವಹಿಸಲು ಇಷ್ಟವಿಲ್ಲ.ಬದಲಿಗೆ ವಿದ್ಯುನ್ಮಾನ ಮತಯಂತ್ರದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತದೆ ಎಂದು ಹೇಳಿತ್ತು. ಭಾಗವಹಿಸಿದ ಮತ್ತೊಂದು ಪಕ್ಷವಾದ ಎನ್ ಸಿಪಿ ತಂಡ ಕೂಡ ಶೈಕ್ಷಣಿಕ ತರಬೇತಿ ಭಾಗವಾಗಿ ಭಾಗವಹಿಸಿತ್ತಷ್ಟೇ ಹೊರತು ಸವಾಲುಗಳನ್ನು ಸ್ವೀಕರಿಸಲು ಅದಕ್ಕೆ ಆಸಕ್ತಿಯಿರಲಿಲ್ಲ ಎಂದು ಹೇಳಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ತಿಳಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಎಂ ತಂಡಕ್ಕೆ ಸಂಪೂರ್ಣ ತೃಪ್ತಿಯಾಗಿದೆ. ಚುನಾವಣಾ ಆಯೋಗ ಇಂತಹ ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮುಂಚೆಯೇ ನಡೆಸಬೇಕಿತ್ತು ಎಂದು ಹೇಳಿದೆ. ಎನ್ ಸಿಪಿ ಕೂಡ ಯಾವುದೇ ಸವಾಲುಗಳನ್ನು ಸ್ವೀಕರಿಸಲು ಒಲವು ಹೊಂದಿಲ್ಲ ಎಂದು ತಿಳಿಸಿದರು.
ಇತ್ತೀಚೆಗಿನ ಮಹಾರಾಷ್ಟ್ರ ನಗರಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಎನ್ ಸಿಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಆಯುಕ್ತರು, ಮಹಾರಾಷ್ಟ್ರ ನಗರಪಾಲಿಕೆ ಚುನಾವಣೆಗೆ ಸಂಬಂಧಪಟ್ಟಂತೆ ಎನ್ ಸಿಪಿಯ ಸಂಶಯವಾಗಿತ್ತು. ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಬಳಸಿದ ವಿದ್ಯುನ್ಮಾನ ಮತಯಂತ್ರ ರಾಜ್ಯದ್ದಾಗಿದ್ದು ಅದಕ್ಕೂ ಕೇಂದ್ರ ಚುನಾವಣಾ ಆಯೋಗದ ಮತಯಂತ್ರಕ್ಕೂ ಸಂಬಂಧವಿಲ್ಲ ಎಂದು ಇಂದು ಸ್ಪಷ್ಟಪಡಿಸಿದ್ದೇವೆ. ಕೇಂದ್ರ ಚುನಾವಣಾ ಆಯೋಗದ ಮತ್ತು ರಾಜ್ಯ ಚುನಾವಣಾ ಆಯೋಗದ ಮತಯಂತ್ರಗಳನ್ನು ವಿಭಜಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಎನ್ ಸಿಪಿ ಬಯಸಿದೆ ಎಂದರು.
ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಲಕ್ಷಣಗಳ ಬಗ್ಗೆ ವಿಸ್ತೃತವಾದ ಪ್ರಾತ್ಯಕ್ಷಿಕೆಯನ್ನು ವಿದ್ಯುನ್ಮಾನ ಮತಯಂತ್ರಗಳ ಸವಾಲುಗಳನ್ನು ಇಂದು ಬೆಳಗ್ಗೆ ಮಾಡಲಾಯಿತು. ಏಳು ರಾಷ್ಟ್ರ ಪಕ್ಷಗಳು, 49 ರಾಜ್ಯ ರಾಜಕೀಯ ಪಕ್ಷಗಳಲ್ಲಿ ಕೇವಲ ಎನ್ ಸಿಪಿ ಮತ್ತು ಸಿಪಿಎಂಗಳು ಮಾತ್ರ ಭಾಗವಹಿಸಿದ್ದವು.  
ಇಂದು ಬೆಳಗ್ಗೆ 10 ಗಂಟೆಗೆ 4 ತಾಸುಗಳ ಸವಾಲು ಆರಂಭವಾಯಿತು. ಸಿಪಿಎಂ ಪಕ್ಷದ ನಿಯೋಗದ ಸದಸ್ಯರು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರೆ ಎನ್ ಸಿಪಿ ತಂಡ ಆಯೋಗದ ತಾಂತ್ರಿಕ ಸಮಿತಿ ತಜ್ಞರ ಜೊತೆ ಸಂವಾದ ನಡೆಸಿತು.
ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಿಂದ ತಂದ 4 ವಿದ್ಯುನ್ಮಾನ ಮತಯಂತ್ರಗಳನ್ನು ಎರಡೂ ಪಕ್ಷಗಳಿಗೆ ನೀಡಲಾಯಿತು. ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಇತ್ತೀಚೆಗೆ ಪಂಚರಾಜ್ಯಗಳ ಚುನಾವಣೆ ಮುಗಿದ ಬಳಿಕ ಹಲವು ರಾಜಕೀಯ ಪಕ್ಷಗಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪ್ರಾತ್ಯಕ್ಷಿಕೆಗೆ ಮುಂದಾಗಿದ್ದು ವಿದ್ಯುನ್ಮಾನ ಮತಯಂತ್ರಗಳು ತಿರುಚಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com