ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ, ದೆಹಲಿಯಲ್ಲಿ 23 ಕಡೆ ಎನ್ ಐ ಎ ದಾಳಿ; ಉಗ್ರ ಚಟುವಟಿಕೆಗಾಗಿ ಸಂಗ್ರಹಿಸಿದ್ದ 1 ಕೋಟಿ ರೂ. ವಶ

ಶ್ರೀನಗರ, ದೆಹಲಿ ಮತ್ತು ಹರ್ಯಾಣದ ೨೩ ವಿವಿಧ ಪ್ರದೇಶಗಳಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿರುವ ಎನ್ ಐ ಎ, ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಮೂಲಕ ಭಯೋತ್ಪಾದಕ ಸಂಘಟನೆಗಳು..
ನವದೆಹಲಿ: ಶ್ರೀನಗರ, ದೆಹಲಿ ಮತ್ತು ಹರ್ಯಾಣದ ೨೩ ವಿವಿಧ ಪ್ರದೇಶಗಳಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿರುವ ಎನ್ ಐ ಎ, ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಮೂಲಕ ಭಯೋತ್ಪಾದಕ ಸಂಘಟನೆಗಳು ನಡೆಸುವ ಚಟುವಟಿಕೆಗಳಿಗಾಗಿ ಸಂಗ್ರಹಿಸಿದ್ದ ಸುಮಾರು ೧ ಕೋಟಿ ರೂ ವಶಪಡಿಸಿಕೊಂಡಿದೆ. 
ಶ್ರೀನಗರದಲ್ಲಿ ೧೪ ಕಡೆ, ದೆಹಲಿಯಲ್ಲಿ ೮ ಪ್ರದೇಶಗಳಲ್ಲಿ ಮತ್ತು ಹರ್ಯಾಣದಲ್ಲಿ ಒಂದು ಕಡೆ ಈ ದಾಳಿ ನಡೆದಿದೆ. ಶ್ರೀನಗರಲ್ಲಿ ೬೫-೭೦ ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದರೆ, ದೆಹಲಿಯಲ್ಲಿ ೩೫-೪೦ ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಮೂವರು ಪ್ರತ್ಯೇಕವಾದಿ ಮುಖಂಡರಾದ - ತೆಹರೀಕ್-ಎ-ಹುರಿಯತ್ ನ ಗಾಜಿ ಜಾವೇದ್ ಬಾಬಾ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖಂಡ ಫಾರೂಕ್ ಅಹ್ಮದ್ ದರ್ ಅಕಾ ಬಿಟ್ಟ ಕರಾಟೆ ಮತ್ತು ಉಚ್ಛಾಟಿತ ಹುರಿಯತ್ ಮುಖಂಡ ನಯೀಮ್ ಖಾನ್ ಇವರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ. 
ಮೇ ೧೯ ರಂದು ಹುರಿಯತ್ ಅಧ್ಯಕ್ಷ ಸಯ್ಯದ್ ಅಲಿ ಷಾ ಗಿಲಾನಿ ಮತ್ತು ಅವರ ನಿಕಟವರ್ತಿ ಹುರಿಯತ್ ಪ್ರಾಂತ್ಯ ಅಧ್ಯಕ್ಷ ನಯೀಮ್ ಖಾನ್, ದರ್ ಮತ್ತು ಬಾಬಾ ಅವರನ್ನು ಪ್ರಾಥಮಿಕ ವಿಚಾರಣೆ ನಡೆಸಿದ ಮಾಹಿತಿಯ ಆಧಾರದ ಮೆಲೆಗೆ ಈ ದಾಳಿ ನಡೆಸಲಾಗಿದೆ. 
ದೆಹಲಿಯ ಚಾಂದಿನಿ ಚೌಕ್ ಮತ್ತು ಬಲ್ಲಿಮಾರನ್ ನಲ್ಲಿ ಮಧ್ಯವರ್ತಿಯ ಮೂಲಕ ಹಣ ಪಡೆದಿರುವುದಾಗಿ ಗುಪ್ತ ವಿಡಿಯೋ ಕಾರ್ಯಾಚರಣೆಯಲ್ಲಿ ಈ ಪ್ರತ್ಯೇಕವಾದಿ ಮುಖಂಡರು ಒಪ್ಪಿಕೊಂಡಿರುವುದರಿಂದ ರಾಜಧಾನಿಯಲ್ಲಿಯೂ ದಾಳಿ ನಡೆಸಲಾಗಿದೆ. 
ದೆಹಲಿಯ ರೋಹಿಣಿ ಮತ್ತು ಗ್ರೇಟರ್ ಕೈಲಾಶ್ ನಲ್ಲಿಯೂ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ನಡೆದಿತ್ತು.
ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಹಣ ಪಡೆದಿದ್ದಾಗಿ ಖಾನ್ ವಿಡಿಯೋದಲ್ಲಿ ಒಪ್ಪಿಕೊಂಡಿದ್ದರು. ಇಂಡಿಯಾ ಟುಡೇ ಟಿವಿ ವಾಹಿನಿ ಈ ವಿಡಿಯೋವನ್ನು ಮೇ ೧೬ ರಂದು ಬಿಡುಗಡೆ ಮಾಡಿತ್ತು. 
"ಪ್ರಾಥಮಿಕ ತನಿಖೆಯನ್ನು, ಲಷ್ಕರ್ ಎ ತೈಬಾ ಮುಖಂಡ ಹಫೀಜ್ ಸಯೀದ್ ಮತ್ತು ಇತರ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಎಫ್ ಐ ಆರ್ ಆಗಿ ಬದ್ಲಿಸಿದ್ದೇವೆ" ಎಂದು ಎನ್ ಐ ಎ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಈ ಮೂವರು ಪ್ರತ್ಯೇಕವಾದಿ ಮುಖಂಡರನ್ನು ಏಜೆನ್ಸಿ ಪ್ರಶ್ನಿಸಿತ್ತು. 

Related Stories

No stories found.

Advertisement

X
Kannada Prabha
www.kannadaprabha.com