ಚೆನ್ನೈ: ಆರ್ ಎಸ್ಎಸ್ ನ್ನು ಎದುರಿಸಲು ಭಗವದ್ಗೀತೆ ಹಾಗೂ ಉಪನಿಷದ್ ಗಳನ್ನು ಓದುತ್ತಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ, ಆರ್ ಎಸ್ಎಸ್ ನ ವಿರುದ್ಧ ಹೋರಾಡುತ್ತಿದ್ದೇನೆ ಆದ್ದರಿಂದ ಇತ್ತೀಚಿನ ದಿನಗಳಲ್ಲಿ ನಾನು ಭಗವದ್ಗೀತೆ ಹಾಗೂ ಉಪನಿಷತ್ ಗಳನ್ನು ಹೆಚ್ಚು ಅಧ್ಯಯನ ಮಾಡುತ್ತಿದ್ದೇನೆ ಎಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ ಹೇಳಿದ್ದಾರೆ.
ನೀವು (ಆರ್ ಎಸ್ಎಸ್) ನವರು ಜನರನ್ನು ಹತ್ತಿಕ್ಕುತ್ತಿದ್ದೀರಿ ( ಒಡೆಯುತ್ತಿದ್ದೀರಿ) ಆದರೆ ಉಪನಿಷದ್ ಗಳಲ್ಲಿ ಎಲ್ಲರೂ ಒಂದೇ ಎಂಬ ಸಂದೇಶವಿದೆ. ನಿಮ್ಮ ಧರ್ಮ ಹೇಳಿರುವುದಕ್ಕೆ ತದ್ವಿರುದ್ಧವಾಗಿ ನೀವು ಹೇಗೆ ನಡೆಯಲು ಸಾಧ್ಯ ಎಂದು ಆರ್ ಎಸ್ಎಸ್ ನ್ನು ಪ್ರಶ್ನಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ಭಾರತದ ಮೂಲತತ್ವವನ್ನು ಅರಿತುಕೊಂಡಿಲ್ಲ, ಕೇವಲ ನಾಗ್ಪುರವನ್ನು ಮಾತ್ರ ಅರಿತುಕೊಂಡಿದೆ ಎಂದು ರಾಹುಲ್ ಗಾಂಧಿ ಇದೇ ಕಾರ್ಯಕ್ರಮದಲ್ಲಿ ವ್ಯಂಗ್ಯವಾಡಿದ್ದಾರೆ.